ಬೆಂಗಳೂರು : ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡದೇ ಇರುವುದೇ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರಬಲ ಅಸ್ತ್ರ ಎಂದು ಶಾಸಕ ಕೆ ಎಂ ಶಿವಲಿಂಗೇಗೌಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಕೇಂದ್ರದ ಆಹಾರ ಗೋದಾಮುಗಳಲ್ಲಿ ಸಾಕಷ್ಟು ಅಕ್ಕಿ ಇದ್ದರೂ, ರಾಜ್ಯ ಸರ್ಕಾರವು ಹಣ ನೀಡುತ್ತೇವೆ ಎಂದರೂ ಕೂಡ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಬಡವರಿಗೆ ಉಪಯೋಗವಾಗುವ ಮಹತ್ವದ ಯೋಜನೆಗಳಿಗೆ ಕೇಂದ್ರ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು.
ಶ್ರೀಮಂತರಿಗೆ ಕೋಟ್ಯಾಂತರ ರೂ. ಕೊಡುವ ಬದಲಾಗಿ ರಾಜ್ಯದ ಎಲ್ಲಾ ಬಡವರಿಗೆ ದೊರಕುವ ಯೋಜನೆಗಳನ್ನು ಮಾಡುವುದು ಉತ್ತಮವಾಗಲಿದೆ. ಇದರಿಂದ ಬಡವರ ಅಭಿವೃದ್ಧಿಯಾಗುತ್ತದೆ. ರಾಜ್ಯದ ಆದಾಯವೂ ಹೆಚ್ಚಾಗುತ್ತದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ನ ಪಂಚ ಗ್ಯಾರಂಟಿ ಯೋಜನೆಗಳು ಜನಪರವಾಗಿವೆ. ಅನ್ನಭಾಗ್ಯಕ್ಕೆ ಅಕ್ಕಿ ನೀಡದೇ ಬಿಜೆಪಿಯವರು ದೊಡ್ಡ ಪ್ರಮಾದ ಮಾಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಭಾರಿ ಪರಿಣಾಮ ಬೀರಲಿದೆ. ನಾವು ಇಷ್ಟಕ್ಕೇ ಸುಮ್ಮನೆ ಬಿಡುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅರೆಯುತ್ತೇವೆ ಎಂದು ಗುಡುಗಿದರು.
ಬಿಜೆಪಿ ಆಕ್ಷೇಪ: ಇದಕ್ಕೆ ಬಿಜೆಪಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಶಾಸಕರು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುವ ಬದಲು ರಾಜಕೀಯದ ಭಾಷಣ ಮಾಡುತ್ತಿದ್ದಾರೆ. ಅರೆಯುತ್ತೇವೆ ಎನ್ನುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಆಗ ಬಿಜೆಪಿ ಶಾಸಕ ಸುನಿಲ್ಕುಮಾರ್ ಮಾತನಾಡಿ, ಇದು ಚುನಾವಣೆಯ ಭಾಷಣ. ಶಿವಲಿಂಗೇಗೌಡರು ಜೆಡಿಎಸ್ನಲ್ಲಿ ಏನು ಅರೆಯುತ್ತಿದ್ದರು, ಕಾಂಗ್ರೆಸ್ಗೆ ಬಂದು ಏನು ಅರೆಯುತ್ತಿದ್ದಾರೆ ಎಂದು ಹೇಳಬೇಕು ಎಂದು ಸವಾಲು ಹಾಕಿದರು.
ಬಿಜೆಪಿ ವಿರುದ್ಧ ಶಿವಲಿಂಗೇಗೌಡ ಅಸಮಾಧಾನ: ಅದಕ್ಕೆ ಉತ್ತರಿಸಿದ ಶಿವಲಿಂಗೇಗೌಡರು, ಕಾಂಗ್ರೆಸ್ಗೆ ನಾನು ಬಂದ ಬಳಿಕ 137 ಸ್ಥಾನ ಗೆದ್ದಿದೆ. ಮುಂದಿನ ದಿನಗಳಲ್ಲಿ ಎನ್ಡಿಎ ಸರ್ಕಾರವನ್ನು ಕೆಡವಿ ಕೇಂದ್ರದಲ್ಲಿ ಯುಪಿಎ ಸರ್ಕಾರ ತರುತ್ತೇವೆ ಎಂದು ಪ್ರತಿ ಸವಾಲು ಹಾಕಿದರು. ಇದು ಕೆಲಕಾಲ ಗದ್ದಲಕ್ಕೂ ಕಾರಣವಾಯಿತು. ಶಿವಲಿಂಗೇಗೌಡರು ಮಾತನಾಡುವಾಗ ಬಿಜೆಪಿ ಶಾಸಕರು ಪದೇ ಪದೇ ಅಡ್ಡಿಪಡಿಸುವುದಕ್ಕೆ ಆಕ್ಷೇಪಗಳು ವ್ಯಕ್ತವಾದವು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಿವಲಿಂಗೇಗೌಡರು, ಬಿಜೆಪಿಯವರು ಮಾತನಾಡುವಾಗ ಒಂದು ಪದವನ್ನೂ ವಿರೋಧ ಮಾಡದೆ ಕುಳಿತು ಕೇಳಿದ್ದೇವೆ. ಈಗ ಬಿಜೆಪಿಯವರು ನನ್ನ ಮಾತಿಗೆ ವಿರೋಧ ಮಾಡುತ್ತಿದ್ದಾರೆ. ಮುಂದೆ ಬಿಜೆಪಿಯವರು ಮಾತನಾಡುವಾಗ ವಿರೋಧ ಮಾಡುವ ಸಂಪ್ರದಾಯವನ್ನು ಬೆಳೆಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಾನು ಪ್ರತಿಪಕ್ಷಗಳಿಗೆ ಪ್ರಿಯವಾಗುವಂತೆ ಮಾತನಾಡಲು ಬಂದಿಲ್ಲ, ವಾಸ್ತವಾಂಶ ಹೇಳುತ್ತಿದ್ದೇನೆ. ತೀರಾ ಸಂಕಷ್ಟದಲ್ಲಿ ಮಾತನಾಡುವ ಅಗತ್ಯ ನನಗಿಲ್ಲ. ನಾನು ಹೇಳುವುದರಲ್ಲಿ ಒಂದೇ ಒಂದು ಪದ ತಪ್ಪಿದ್ದರೆ ಸಾಬೀತುಪಡಿಸಿ, ಈಗಲೇ ಸದನದಿಂದ ಆಚೆ ಹೋಗುತ್ತೇನೆ ಎಂದು ಪ್ರತಿ ಸವಾಲು ಹಾಕಿದರು.
ರಾಜ್ಯ ಸರ್ಕಾರ ಬಡ ಜನರಿಗಾಗಿ 50 ರಿಂದ 60 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ರಾಜ್ಯದ 4.18 ಕೋಟಿ ಜನ ಇದರ ಫಲಾನುಭವಿಗಳಾಗಿದ್ದಾರೆ. ಶಕ್ತಿ ಯೋಜನೆಯಿಂದ ಮಹಿಳೆಯರು ಧರ್ಮಸ್ಥಳ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಖುಷಿಯಾಗಿದ್ದಾರೆ. ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ಬಡವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸುವುದಾಗಿ ಹೇಳಿತ್ತು. ಆಗ 400 ರೂಪಾಯಿಗಳಿದ್ದ ಗ್ಯಾಸ್ ದರ ಈಗ 1,200 ರೂ.ಗೆ ತಲುಪಿದೆ. ಬಡವರ ನೆಮ್ಮದಿ ಕೆಡುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ನೀಡುವ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಸಿದ್ದರಾಮಯ್ಯ ಸರ್ಕಾರ ನೆಮ್ಮದಿಯ ವಾತಾವರಣ ಕಲ್ಪಿಸುತ್ತಿದೆ ಎಂದರು.
ಇದನ್ನೂ ಓದಿ: ಸರ್ಕಾರಗಳು ನೀಡುವ ಭರವಸೆಗಳ ವಿಚಾರ; ನಿಲ್ಲದ ಕಾಂಗ್ರೆಸ್-ಬಿಜೆಪಿ ಶಾಸಕರ ನಡುವೆ ಮಾತಿನ ಸಮರ