ಬೆಂಗಳೂರು: ಇಂದು ವಿಧಾನಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಕಾಡುಹಂದಿ ದೊಡ್ಡ ಸದ್ದು ಮಾಡಿತು. ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ವನ್ಯಜೀವಿಗಳ ವಿಚಾರವಾಗಿ ಆರಂಭಿಸಿದ ಚರ್ಚೆ ಕಾಡು ಹಂದಿಗಳತ್ತ ತಿರುಗಿತು. ಕಾಡು ಹಂದಿಯನ್ನು ವನ್ಯಪ್ರಾಣಿ ವಿಭಾಗಕ್ಕೆ ಸೇರಿಸಿದ್ದಾರೆ. ಅದು ಸಾವನ್ನಪ್ಪಿದ್ರೆ ಜನರನ್ನು ಪೊಲೀಸರು ಹಿಡಿದುಕೊಂಡು ಕೇಸ್ ಹಾಕ್ತಾರೆ. ಇದು ಕೊಡಗಿಗೆ ಮಾಡಿದ ಅವಮಾನ. ಕಾಡು ಹಂದಿಯನ್ನು ವನ್ಯಪ್ರಾಣಿ ವಿಭಾಗದಿಂದ ಬೇರ್ಪಡಿಸಬೇಕು ಎಂದಿದ್ದಾರೆ.
ಕಾಡು ಹಂದಿಗಳ ಉಪಟಳ ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿದೆ. ಇವುಗಳ ಉಪಟಳ ತಡೆಯಲು ಯಾರೂ ತಲೆಹಾಕುವುದಿಲ್ಲ. ಗುಂಡು ಹೊಡೆದು ಸಾಯಿಸುವ ಕಾರ್ಯವನ್ನು ಅಲ್ಲಲ್ಲಿ ಮಾಡಲಾಗುತ್ತಿದೆ. ಯಾರೋ ಹೊಡೆದ ಗುಂಡಿಗೆ ಇಲ್ಲವೇ ಯಾರೋ ಹಾಕಿದ ಬಲೆಗೆ ಸಿಲುಕಿ ಮಂದಿ ಮೃತಪಟ್ಟರೆ ಅನಗತ್ಯವಾಗಿ ಕೇಸು ದಾಖಲಿಸಿ ಕಿರುಕುಳ ನೀಡಲಾಗುತ್ತದೆ. ಇಂತಹ ಮುಜುಗರವನ್ನು ತಪ್ಪಿಸುವ ನಿಟ್ಟಿನಲ್ಲಿ ಕಾಡು ಹಂದಿಯನ್ನು ವನ್ಯಪ್ರಾಣಿ ವಿಭಾಗದಿಂದ ಬೇರ್ಪಡಿಸಬೇಕು ಎಂದು ವೀಣಾ ಅಚ್ಚಯ್ಯ ಮನವಿ ಮಾಡಿದರು.
ಬಸವರಾಜ ಹೊರಟ್ಟಿ ಮಾತನಾಡಿ, ನಮ್ಮ ಭೋಜೆಗೌಡ ತಿಂಗಳಿಗೊಮ್ಮೆ ಹಂದಿ ಹೊಡೆಯುತ್ತಿರುತ್ತಾರೆ. ಆದರೆ, ಅವರ ಬಗ್ಗೆ ಏನೂ ಕ್ರಮ ಆಗಲ್ಲ ಎಂದು ಕಾಲೆಳೆದರು. ನಂತರ ಭೋಜೆಗೌಡರು ಮಾತನಾಡಿ, ಕಾಡುಹಂದಿಗಳ ಹಾವಳಿ ತೀವ್ರವಾಗಿದೆ. ಇದರಿಂದ ರೈತರ ಬೆಳೆ ಹಾಳಾಗುತ್ತಿದೆ. ಹುಲಿ, ಚಿರತೆ, ಸಾಲಿಗೆ ಕಾಡುಹಂದಿಯನ್ನು ಸೇರಿಸುವುದು ಸರಿಯಲ್ಲ. ಕಾಡುಹಂದಿಯನ್ನು ಬೇಟೆ ಯಾಡಲು ಅವಕಾಶ ನೀಡಬೇಕು. ವರ್ಷದಲ್ಲಿ ಒಂದು ತಿಂಗಳು ಅವಕಾಶವನ್ನು ನೀಡಬೇಕು ಎಂದರು.
ಜಟಾಪಟಿ: ಬೀದರ್ ಐಟಿ ಪಾರ್ಕ್ ಸ್ಥಾಪನೆ ಬಗ್ಗೆ ಮಾಜಿ-ಹಾಲಿಗಳ ಜಟಾಪಟಿ ನಡೆಯಿತು. ಬೀದರ್‌ನಲ್ಲಿ ಐಟಿ ಪಾರ್ಕ್ ಇನ್ಕ್ಯುಬೇಷನ್ ಸೆಂಟರ್ ಸ್ಥಾಪನೆ ಮಾಡಲು ಸರ್ಕಾರ ಅನುದಾನ ನೀಡಲಾಗಿದೆಯೇ ಎಂದು ಅರವಿಂದ ಕುಮಾರ್ ಅರಳಿ ಪ್ರಶ್ನೆ ಬಗ್ಗೆ ವಿಪಕ್ಷ ನಾಯಕ ಮತ್ತು ಡಿಸಿಎಂ ಅಶ್ವತ್ಥ್ ನಾರಾಯಣ ನಡುವೆ ಜಟಾಪಟಿಯೇ ನಡೆಯಿತು.
ಸ್ಥಾಪನೆ ವಿಚಾರದಲ್ಲಿ ಕನಿಷ್ಠ ಪರಿಶೀಲಿಸುತ್ತೇವೆ ಎಂಬ ಭರವಸೆಯನ್ನಾದರೂ ಸಚಿವರು ನೀಡಬೇಕು ಎಂದು ಎಸ್ಆರ್ ಪಾಟೀಲ್ ಒತ್ತಾಯಿಸಿದರು. 2015-16ರಲ್ಲಿ ನಾನು ಐಟಿ-ಬಿಟಿ ಸಚಿವನಾಗಿದ್ದಾಗ ಬಜೆಟ್ನಲ್ಲಿ ಐಟಿ ಪಾರ್ಕ್ ಘೋಷಣೆ ಮಾಡಿದ್ವಿ. ಆದರೆ, ಅನುದಾನ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನಂತರ ಡಿಸಿಎಂ ಅಶ್ವತ್ಥ್ ನಾರಾಯಣ ಮಾತನಾಡಿ, ಬಜೆಟ್ ಭಾಷಣದಲ್ಲಿ ಓದಿದ್ದಾರೆ. ಆದರೆ, ಈವರೆಗೂ ಹಣ ಮೀಸಲಿಟ್ಟಿಲ್ಲ. ಹೀಗಾಗಿ ಬೀದರ್‌ನಲ್ಲಿ ಐಟಿ ಪಾರ್ಕ್ ಸ್ಥಾಪನೆ ಬಗ್ಗೆ ಫಿಸಿಬಲ್ ರಿಪೋರ್ಟ್ ಮಾಡಿಲ್ಲ ಎಂದರು.