ಬೆಂಗಳೂರು : ರಾಜ್ಯ ಮೈತ್ರಿ ಸರ್ಕಾರ ಪತನ ನಂತರ ಮುಂದೇನು ಎನ್ನುವ ವಿಚಾರವಾಗಿ ಕೈ ನಾಯಕರು ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ. ಇಂದು ಕೃಷ್ಣಭೈರೇಗೌಡ ನಿವಾಸದಲ್ಲಿ ಭೋಜನ ಕೂಟ ಏರ್ಪಡಿಸಿ ಮತ್ತೆ ಮೀಟಿಂಗ್ ನಡೆಸಲಾಗಿದೆ.
ಮಾಜಿ ಸಚಿವ ಕೃಷ್ಣಭೈರೇಗೌಡ ನಿವಾಸದಲ್ಲಿ ನಡೆದ ಊಟದ ಸಭೆಯಲ್ಲಿ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಜಮೀರ್ ಅಹಮ್ಮದ್, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.
ಮೈತ್ರಿ ಸರ್ಕಾರದಲ್ಲಿ ಸಹಕಾರ ನೀಡಿದ ಪಕ್ಷದ ನಾಯಕರಿಗೆ ಕೃತಜ್ಞತೆ ಸಲ್ಲಿಸಲು ಭೋಜನಕೂಟವನ್ನು ಮಾಜಿ ಸಚಿವ ಕೃಷ್ಣಬೈರೇಗೌಡ ಹಮ್ಮಿಕೊಂಡಿದ್ದು, ಯಾವುದೇ ಸಭೆ ನಡೆಸಿಲ್ಲವೆಂದು ನಾಯಕರು ಹೇಳಿದ್ದಾರೆ.
ಜೆಡಿಎಸ್ ಜತೆ ಕೈ ಜೋಡಿಸಿ ಪಕ್ಷಕ್ಕೆ ಸಾಕಷ್ಟು ನಷ್ಟ ಆಗಿದೆ ಎಂಬ ಅಭಿಪ್ರಾಯ ಈ ವೇಳೆ ಕೇಳಿ ಬಂದಿದೆ. ಜೊತೆಗೆ ಹೈಕಮಾಂಡ್ಗೆ ಈ ಬಗ್ಗೆ ಮಾಹಿತಿ ಒದಗಿಸಿ ಮೈತ್ರಿ ಮುರಿದುಕೊಳ್ಳುವ ಪ್ರಸ್ತಾಪ ಮತ್ತು ಅನರ್ಹಗೊಂಡ ಅತೃಪ್ತ ಶಾಸಕರ ನಡೆಯ ಬಗ್ಗೆಯೂ ಚರ್ಚಿಸಲಾಗಿದೆ. ಈ ಕುರಿತು ಪಕ್ಷದ ನಿಲುವು ಮತ್ತು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಮಾತುಕತೆ ನಡೆದಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.