ಬೆಂಗಳೂರು: ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂ ತೀರ್ಪಿನ ಕುರಿತಂತೆ ರಾಜ್ಯಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಕಾಂಗ್ರೆಸ್ ನಿರ್ಧಾರ ಕೈಗೊಂಡಿದೆ. ಈ ನಿಟ್ಟಿನಲ್ಲಿ ಇಂದು ನಾಯಕರುಗಳ ಮಹತ್ವದ ಸಭೆ ಕರೆದು ಚರ್ಚೆ ನಡೆಸಿದೆ.
ಕೆಪಿಸಿಸಿಯಲ್ಲಿ ಮಹತ್ವದ ಸಭೆ ಈಗ ಆರಂಭವಾಗಿದೆ. ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬೆಂಗಳೂರಿನ ಶಾಸಕರು, ಪರಿಷತ್ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದಾರೆ.
ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂ ತೀರ್ಪು ಬರಲು ಸಮರ್ಥ ವಾದ ಮಂಡಿಸದ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಹೋರಾಟದ ದಿನಾಂಕ ಹಾಗೂ ಸ್ವರೂಪವನ್ನು ಚರ್ಚಿಸಲು ಇಂದು ಸಭೆ ಕರೆಯಲಾಗಿದೆ.
ಸಭೆಯಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್, ಯು ಟಿ ಖಾದರ್, ಶಾಸಕ ಎನ್ ಎ ಹ್ಯಾರೀಸ್, ಅಶೋಕ್ ಪಟ್ಟಣ, ಎಂ ಡಿ ಲಕ್ಷ್ಮಿನಾರಾಯಣ್, ಎಂ ಸಿ ವೇಣುಗೋಪಾಲ್, ಬೆಂಗಳೂರಿನ ಮೂರು ಜಿಲ್ಲಾ ಘಟಕದ ಅಧ್ಯಕ್ಷರು, ಕಾಂಗ್ರೆಸ್ ಮುಂಚೂಣಿ ಘಟಕಗಳ ಮುಖಂಡರು ಭಾಗಿಯಾಗಿದ್ದಾರೆ. ಫೆಬ್ರವರಿ 16ರೊಳಗೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.