ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು, ಮಾಜಿ ಸಚಿವರು, ಶಾಸಕರು ಸೇರಿದಂತೆ ಹಲವು ನಾಯಕರು ಟ್ವೀಟ್ ಮಾಡಿ ಜನತೆಗೆ ಶುಭಾಶಯ ಸಲ್ಲಿಕೆ ಮಾಡಿದ್ದಾರೆ.
ಸಿದ್ದರಾಮಯ್ಯ ತಮ್ಮ ಟ್ವೀಟ್ನಲ್ಲಿ, ಓ ಯುಗಾದಿಯೇ, ಹೊಸ ಕಾಲದ ಆದಿಯೇ, ಲೋಕದ ಜನರ ಕಷ್ಟಗಳ ನೀಗುತ್ತಾ ಬಾ... ಆರೋಗ್ಯದ ಭಾಗ್ಯವನ್ನು ಕರುಣಿಸು ಬಾ. ಎಲ್ಲರ ಬಾಳಲ್ಲಿ ಹೊಸ ವರ್ಷದ ಉತ್ಸಾಹ ತುಂಬುತ್ತಾ ಬಾ. ನಾಡಿನ ಎಲ್ಲ ನನ್ನ ಪ್ರೀತಿಯ ಬಂಧುಗಳಿಗೆ ಯುಗಾದಿಯ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟ್ವೀಟ್ ಮೂಲಕ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದಾರೆ. ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯ ಸಲ್ಲಿಸುತ್ತೇನೆ. ಕರ್ನಾಟಕ ಕೊರೊನಾ ಮುಕ್ತ ರಾಜ್ಯ ಆಗಬೇಕು. ಕಳೆದ ವರ್ಷ ನಾವೆಲ್ಲಾ ನರಳಿದ್ದೇವೆ. ಆರ್ಥಿಕ ಸಾಮಾಜಿಕ ಶೈಕ್ಷಣಿಕವಾಗಿ ನೋವು ಕಂಡಿದ್ದೇವೆ. ಸಾವು, ನೋವು ನೋಡಿದ್ದೇವೆ. ಈ ವರ್ಷವಾದರೂ ಒಳ್ಳೆಯ ಯುಗ ಆರಂಭವಾಗಲಿ ಎಂದು ದೇವರಲ್ಲಿ ಬೇಡುತ್ತೇನೆ. ಎಲ್ಲಾ ರಂಗದಲ್ಲೂ ಅಭಿವೃದ್ಧಿ ಆಗಲಿ, ಆರ್ಥಿಕ ಸಮೃದ್ಧಿ ಸಿಗಲಿ. ಉತ್ತಮ ಆರೋಗ್ಯ ಸಿಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಟ್ವೀಟ್ ಮಾಡಿದ್ದು, ರಾಜ್ಯದ ಸಮಸ್ತರಿಗೂ ನೂತನ ಸಂವತ್ಸರ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಬದುಕಿನ ಮಾರ್ಗಗಳನ್ನು ಬಲು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುವ ಶಕ್ತಿ, ಧೈರ್ಯ, ಮನೋಬಲವನ್ನು ದೇವರು ಕರುಣಿಸಲಿ. ನಿಮ್ಮೆಲ್ಲ ಕಷ್ಟಗಳು ದೂರವಾಗಲಿ. ಕೊರೊನಾ ಎಂಬ ಕಹಿ ಆದಷ್ಟು ಬೇಗ ದೂರಾಗಲಿ. ಎಲ್ಲರ ಬಾಳಲ್ಲಿ ಹೊಸ ಚೇತನ,ಉತ್ಸಾಹ, ನೆಮ್ಮದಿ ಮೂಡಲಿ ಎಂದಿದ್ದಾರೆ.
ಇನ್ನೂ ಸಾಕಷ್ಟು ನಾಯಕರು ತಮ್ಮ ಶುಭಾಶಯವನ್ನು ನಾಡಿನ ಜನತೆಗೆ ಕೋರಿದ್ದಾರೆ.