ಬೆಂಗಳೂರು : ವಿಧಾನಪರಿಷತ್ ನಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ರಾಜಿನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಮುಂದಾಗಿದ್ದ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಹೋರಾಟ ಕೈಬಿಟ್ಟಿದ್ದಾರೆ.
ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ಈಶ್ವರಪ್ಪ ವಿರುದ್ಧ ನಿಲುವಳಿ ಸೂಚನೆ ಮಂಡಿಸಿದ್ದ ಪ್ರತಿಪಕ್ಷಕ್ಕೆ ಎರಡು ಕಡೆಯೂ ನಿಲುವಳಿ ಸೂಚನೆ ತಿರಸ್ಕರಿಸಿರುವುದು ತೀವ್ರ ಬೇಸರ ಉಂಟುಮಾಡಿದೆ. ಕೆಎಸ್ ಈಶ್ವರಪ್ಪ ರಾಷ್ಟ್ರದ್ರೋಹಿ ಹೇಳಿಕೆ ನೀಡಿದ್ದು ಇವರ ವಿರುದ್ಧ ಪ್ರಕರಣ ದಾಖಲಿಸಿ ಸಚಿವ ಸ್ಥಾನದಿಂದ ವಜಾಗೊಳಿಸುವ ಜೊತೆಗೆ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷ ಉಭಯ ಸದನಗಳಲ್ಲೂ ಹೋರಾಟ ನಡೆಸುತ್ತಿದೆ.
ನಾಳೆ ಬೆಳಗ್ಗೆ ಹನ್ನೊಂದು ಗಂಟೆಯವರೆಗೂ ರಾಜ್ಯಸರ್ಕಾರಕ್ಕೆ ಗಡುವು ವಿಧಿಸಿರುವ ಕಾಂಗ್ರೆಸ್ ನಾಯಕರು, ಇಷ್ಟಾದರೂ ಸರ್ಕಾರ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಸದನದ ಒಳಗೆ ಹಾಗೂ ಹೊರಗೆ ತನ್ನದೇ ಆದ ಹೋರಾಟ ಕೈಗೊಳ್ಳಲು ತೀರ್ಮಾನಿಸಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ಪ್ರತಿನಿಧಿಗಳು ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತೀರ್ಮಾನ ಹಿಂಪಡೆಯುವ ನಿರ್ಧಾರ ಪ್ರಕಟ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಮತ್ತಿತರರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ತೀರ್ಮಾನ ಪ್ರಕಟಿಸಲಾಗಿದೆ. ಈ ಸುದ್ದಿಗೋಷ್ಠಿಗೆ ಮುನ್ನವೇ ವಿಧಾನಪರಿಷತ್ ನಲ್ಲಿ ಆಹೋರಾತ್ರಿ ಧರಣಿ ನಡೆಸಲು ಪ್ರತಿಪಕ್ಷ ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದರು.
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಹಾಗೂ ಸಚೇತಕ ಪ್ರಕಾಶ್ ರಾಥೋಡ್ ಮತ್ತಿತರ ನಾಯಕರು ಇಂದಿನಿಂದಲೇ ಅಹೋರಾತ್ರಿ ಧರಣಿ ಮುಂದಾಗುವುದಾಗಿ ತಿಳಿಸಿದರು. ಆದರೆ, ಕೆಳಮನೆ ಸದಸ್ಯರು ನಾಳೆ ವರೆಗೂ ಕಾಯುವ ತೀರ್ಮಾನ ಕೈಗೊಂಡಿರುವ ಹಿನ್ನೆಲೆ ಮೇಲ್ಮನೆಯಲ್ಲಿ ಕೈಗೊಳ್ಳಲು ಉದ್ದೇಶಿಸಿದ್ದ ಅಹೋರಾತ್ರಿ ಧರಣಿ ಕೈಬಿಡಲು ತೀರ್ಮಾನಿಸಿದ್ದಾರೆ.
ನಾಳೆವರೆಗೂ ಕಾಯ್ತೇವೆ: ಇನ್ನು ಬಿಕೆ ಹರಿಪ್ರಸಾದ್ ಮಾಧ್ಯಮಗಳ ಜೊತೆ ಮಾತನಾಡಿ, ಕೆಳಮನೆ ನಾಯಕರ ಜೊತೆ ಈ ವಿಚಾರವಾಗಿ ಸಮಾಲೋಚಿಸಿದ್ದೇನೆ. ನಾಳೆ ಬೆಳಗ್ಗಿನ ವರೆಗೂ ಕಾಯುವ ತೀರ್ಮಾನ ತಿಳಿಸಿದ್ದಾರೆ. ಉಭಯ ಸದನಗಳಲ್ಲೂ ಪಕ್ಷದ ನಿಲುವು ಒಂದೇ ಆಗಿರಬೇಕು ಎಂಬ ಉದ್ದೇಶದಿಂದ ತಾವು ಇಂದು ಹಮ್ಮಿಕೊಳ್ಳಲು ಉದ್ದೇಶಿಸಿದೆ ಅಹೋರಾತ್ರಿ ಧರಣಿಯನ್ನು ಕೈ ಬಿಟ್ಟಿರುವುದಾಗಿ ತಿಳಿಸಿದರು.
ನಾವು ಹೋರಾಟವನ್ನು ಹಿಂದಕ್ಕೆ ಪಡೆದಿಲ್ಲ. ನಾಳೆಯವರೆಗೆ ಕಾಯ್ದು ಆಹೋರಾತ್ರಿ ಧರಣಿಯು ಸೇರಿದಂತೆ ನಮ್ಮ ಮುಂದಿರುವ ವಿವಿಧ ರೂಪದ ಹೋರಾಟಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳುತ್ತೇವೆ. ಈಶ್ವರಪ್ಪ ರಾಜೀನಾಮೆ ನೀಡುವವರೆಗೂ ಹಾಗೂ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳುವ ವರೆಗೂ ನಾವು ನಮ್ಮ ಹೋರಾಟ ಕೈ ಬಿಡುವುದಿಲ್ಲ ಎಂದರು.
ಇದನ್ನೂ ಓದಿ: ರಾಷ್ಟ್ರ ಧ್ವಜ ಹಿಡಿದು ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಸದನದ ಬಾವಿಗಿಳಿದು ಕೈ ಶಾಸಕರ ಪ್ರತಿಭಟನೆ