ಬೆಂಗಳೂರು: ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲು ಹೊರಟಿರುವ ಬಿಜೆಪಿ ಸರ್ಕಾರದ ನಿಲುವಿಗೆ ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಮಾತನಾಡಿ, ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ವಿವಾದ ಹುಟ್ಟು ಹಾಕಲು ಹೊರಟಿರುವ ಬಿಜೆಪಿ ನಾಯಕರು ನೆಹರು ಅವರ ಡಿಸ್ಕವರಿ ಆಫ್ ಇಂಡಿಯಾ ಓದಬೇಕು.
ದೇಶಕ್ಕೆ ಶಿಕ್ಷಣ ವ್ಯವಸ್ಥೆ ಬುನಾದಿ ಹಾಕಿದವರು ನೆಹರು. ಶೇ14ರಷ್ಟು ಸಾಕ್ಷರತೆ ಇದ್ದದ್ದನ್ನು ಶೇ 72ಕ್ಕೆ ತರಲು ಕಾರಣ ನೆಹರು. ಆದರೆ ನೆಹರು ಹಾಕಿದ ವೈಜ್ಞಾನಿಕ ತಳಹದಿಯನ್ನು ಬುಡಮೇಲು ಮಾಡಲಾಗುತ್ತಿದೆ. ಕೇಸರಿ ಬಣ್ಣದ ಮೇಲೆ ವಿರೋಧ ಇಲ್ಲ. ಅದು ಅವರ ಗುತ್ತಿಗೆ ಅಲ್ಲ ಎಂದರು.
ಮೋದಿ ಜಮಾನದಲ್ಲಿ ಕರ್ನಾಟಕ ಸವತಿ ಮನೆ ಆಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಕೈಗಾರಿಕೆಗಳ ತವರು ಮನೆ ಆಗಿತ್ತು. ಎಚ್ಎಎಲ್, ಬಿಎಚ್ಇಎಲ್, ಐಟಿಐ ಹೀಗೆ ಅನೇಕ ಸಂಸ್ಥೆಗಳು ಬಂದವು. ಆದರೆ ಮೋದಿ ಜಮಾನದಲ್ಲಿ ಎಲ್ಲವೂ ಗುಜರಾತ್ಗೆ ಹೋಗುತ್ತಿದೆ. ಎಲ್ಲವನ್ನೂ ಕರ್ನಾಟಕದಿಂದ ಅಪಹರಿಸಿಕೊಂಡು ಅವರಿಗೆ ಅನುಕೂಲ ಇರುವ ರಾಜ್ಯಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಕಿಡಿಕಾರಿದರು.
ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮಕ್ಕೆ ನನಗೂ ಆಹ್ವಾನ ಇತ್ತು. ಸಿಎಂ ಕರೆ ಮಾಡಿದ್ದರು, ಆದರೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಇರಲಿಲ್ಲ. ಸಿದ್ದರಾಮಯ್ಯ ಅವರ ಬಳಿ ಚರ್ಚೆ ಮಾಡಿ ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧಾರ ಮಾಡಿದ್ವಿ. ಬೆಂಗಳೂರು ಏರ್ಪೋರ್ಟ್ ನಿರ್ಮಾಣ ಆಗಿದ್ದು ಎಸ್.ಎಂ ಕೃಷ್ಣ ಅವರ ಅವಧಿಯಲ್ಲಿ. ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಎಂ ಕೃಷ್ಣ ಕೂಡಾ ಇದ್ದರೂ ಅವರನ್ನು ವೇದಿಕೆಗೆ ಕರೆಸಿಲ್ಲ. ಇಂತಹ ಕೃತಜ್ಞರು ಇವರು. ಏರ್ಪೋರ್ಟ್ಗೆ ಕೆಂಪೇಗೌಡ ಅಂತ ನಾಮಕರಣ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದರು.
ಟಿಪ್ಪು ಪ್ರತಿಮೆ ಬಗ್ಗೆ ಪ್ರತಿಕ್ರಿಯೆ: ಟಿಪ್ಪು ಪ್ರತಿಮೆ ಸ್ಥಾಪನೆ ಬಗ್ಗೆ ಶಾಸಕ ತನ್ವೀರ್ ಸೇಠ್ ಹೇಳಿಕೆ ವಿಚಾರ ಮಾತನಾಡಿ, ಅದು ಅವರ ಅಭಿಪ್ರಾಯ ಹಾಗೂ ಧೋರಣೆ. ಟಿಪ್ಪು ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ. ಟಿಪ್ಪು ಸುಲ್ತಾನ್ ಪ್ರತಿಮೆ ಏಕೆ ಮಾಡಬಾರದು? ಎಸ್ಎಲ್ ಬೈರಪ್ಪ ಇತಿಹಾಸಕಾರ ಅಲ್ಲ. ಎಲ್ಲ ಸಾಹಿತಿಗಳು ಇತಿಹಾಸಕಾರರಲ್ಲ, ನಮ್ಮ ಇತಿಹಾಸವನ್ನು ಬೈರಪ್ಪ ನೋಡಲಿ. ಕಾದಂಬರಿ ಬರೆದರೆ ಇತಿಹಾಸಕಾರ ಆಗಲ್ಲ. ಇತಿಹಾಸವನ್ನು ಬೈರಪ್ಪ ಓದಬೇಕು.
ಇತಿಹಾಸದಲ್ಲಿ ಟಿಪ್ಪು ಬಗ್ಗೆ ಏನು ಹೇಳಿದ್ದಾರೆ ಎಂದು ನೋಡಬೇಕು. ಯುದ್ಧ ಮಾಡುವಾಗ ಕೆಲವರು ಸಾಯುತ್ತಾರೆ. ಅದಕ್ಕೆ ಚಕ್ರವರ್ತಿ ಕಾರಣ ಎಂದು ಆರೋಪ ಮಾಡುವುದು ಸರಿಯಲ್ಲ. ಟಿಪ್ಪು ಉತ್ತಮ ಆಡಳಿತಗಾರ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರು. ದೇಶಕ್ಕಾಗಿ ಮಕ್ಕಳನ್ನು ಒತ್ತೆ ಇಟ್ಟವರು ಟಿಪ್ಪು. ನಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ಪ್ರತಿಮೆ ನಿರ್ಮಾಣ ಮಾಡುವುದು ಸರ್ಕಾರದ ನಿರ್ಧಾರ, ನಾನು ಮಾತನಾಡಲ್ಲ ಎಂದು ಅಭಿಪ್ರಾಯ ಪಟ್ಟರು.
ಬಣ್ಣದ ಪ್ರಶ್ನೆ ಅಲ್ಲ ಭವಿಷ್ಯದ ಪ್ರಶ್ನೆ: ಮಾಜಿ ಸಚಿವ ಪ್ರಿಯಾಂಕ ಖರ್ಗೆ ಶಾಲೆಗಳಿಗೆ ಸರ್ಕಾರ ಕೇಸರಿ ಬಣ್ಣ ಬಳಿಯಲು ಹೊರಟಿರುವ ವಿಚಾರವಾಗಿ ಮಾತನಾಡಿ, ಇವತ್ತು ಬಂದಿರೋದು ಬಣ್ಣದ ಪ್ರಶ್ನೆ ಅಲ್ಲ. ಎಷ್ಟು ಮೂಲಸೌಕರ್ಯ ಒದಗಿಸಿದ್ದಾರೆ ಅದು ಪ್ರಶ್ನೆ. ಯಾಕೆ ಮಕ್ಕಳ ಭವಿಷ್ಯ ರೂಪಿಸುವುದರಲ್ಲಿ ಆಸಕ್ತಿ ತೋರಿಸುತ್ತಿಲ್ಲ? ಸರ್ಕಾರದ ಆದ್ಯತೆ ನೋಡಿದರೆ ಮಕ್ಕಳ ಭವಿಷ್ಯ ನಿರ್ನಾಮ ಮಾಡಲು ಹೊರಟಂತಿದೆ. ವಿವೇಕ ಅಲ್ಲ ಇದು, ಅವಿವೇಕದ ಪರಮಾವಧಿ ಇದು. ಸ್ವಾಮಿ ವಿವೇಕಾನಂದರ ಯೋಚನಾ ದೃಷ್ಟಿ ಬಗ್ಗೆ ಸರ್ಕಾರಕ್ಕೆ ಆಸಕ್ತಿ ಇಲ್ಲ.
ಕೇಸರಿಯೇ ಯಾಕೆ ಬೇಕು ಬೇಕಿದ್ದರೆ ತ್ರಿವರ್ಣ ಬಣ್ಣ ಮಾಡಿ. ನಿಮ್ಮಂತ ದೇಶಭಕ್ತರು ಯಾರೂ ಇಲ್ಲ ಅಂತೀರಲ್ಲ, ಹಾಗಾದ್ರೆ ತ್ರಿವರ್ಣ ಬಣ್ಣ ಮಾಡಿ. ಇದು ಬಣ್ಣದ ಪ್ರಶ್ನೆ ಅಲ್ಲ, ಮಕ್ಕಳ ಭವಿಷ್ಯದ ಪ್ರಶ್ನೆ ಎಂದರು. ಕೇಸರಿ ಬಣ್ಣ ಹಚ್ಚುವ ವಿಚಾರಕ್ಕೆ ಆರ್ಕಿಟೆಕ್ಚರ್ ಸಲಹೆ ಅಂತಾರೆ. ಹಾಗಾದರೆ ಗುಂಬಲ ತರದ ಬಸ್ ನಿಲ್ದಾಣ ಇವರ ಮಂತ್ರಿಗಳೇ ನಿರ್ಮಾಣ ಮಾಡಿದ್ರಾ? ಆಗ ಇವರಿಗೆ ಆರ್ಕಿಟೆಕ್ಚರ್ ಬೇಕಾಗಿಲ್ವಾ? ಕೇಂದ್ರ ವರದಿ ನೋಡಿದ್ರೆ ಶಿಕ್ಷಣ ವ್ಯವಸ್ಥೆ ಕುಸಿದಿದೆ ಇದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ.
ಕೆಂಪೇಗೌಡರ ಪ್ರತಿಮೆ ಅನಾವರಣ ಚುನಾವಣೆ ಕಾರಣಕ್ಕೆ ಉದ್ಘಾಟನೆ ಮಾಡಲಾಗಿದೆ. ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಆದ ಮೇಲೆ ಸಾರ್ವಜನಿಕರಿಗೆ ಅವಕಾಶ ನೀಡಿಲ್ಲ. ಇನ್ನೂ ಮೂರ್ನಾಲ್ಕು ತಿಂಗಳ ಕೆಲಸ ಬಾಕಿ ಇದೆ. ಏರ್ಪೋರ್ಟ್ ಟರ್ಮಿನಲ್ - 2 ಕೂಡ ಇನ್ನೂ ಎರಡು ತಿಂಗಳ ಕೆಲಸ ಬಾಕಿ ಇದೆ. ಟರ್ಮಿನಲ್ - 2 ಕಾರ್ಯ ಚಟುವಟಿಕೆ ಆರಂಭ ಮಾಡಲು ಇನ್ನೂ ಮೂರು ತಿಂಗಳು ಬೇಕು. ಚುನಾವಣೆ ಕಾರಣಕ್ಕಾಗಿ ಉದ್ಘಾಟನೆ ಮಾಡಿದ್ದಾರೆ. ಅವರಲ್ಲೇ ಒಕ್ಕಲಿಗರು ಲೀಡರ್ ಶಿಪ್ಗಾಗಿ ಪೈಪೋಟಿ ನಡೀತಿದೆ ಎಂಬ ಗಂಭೀರ ಆರೋಪ ಮಾಡಿದರು.
ಇನ್ನು ಪ್ರತಾಪ್ ಸಿಂಹ ವಿಚಾರವಾಗಿ ಮಾತನಾಡಿ, ಪ್ರತಾಪ್ ಸಿಂಹ ಮತ್ತೆ ಏನಾದ್ರೂ ಧ್ವಂಸ ಮಾಡ್ತೀವಿ ಅನ್ನುವುದರಲ್ಲಿ ಆಶ್ಚರ್ಯ ಇಲ್ಲ. ಧ್ವಂಸ ಮಾಡೋದೇ ಪ್ರತಾಪ ಸಿಂಹ ಜಾಯಮಾನ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ವಾ? ಟಿಪ್ಪು ಕಾರಣದಿಂದ ಸಿಲ್ಕ್ ಇಂಡಸ್ಟ್ರಿ ಆಗ್ತಾ ಇಲ್ವಾ?ಇತಿಹಾಸದ ಕೊರತೆ ಜ್ಞಾನದ ಕೊರತೆ ಇದೆ ಅವರಿಗೆ. ಇತಿಹಾಸ ಸರಿಯಾಗಿ ಓದಿ ಚರ್ಚೆಗೆ ಬರುವುದಕ್ಕೆ ಅವರು ತಯಾರಿಲ್ಲ ಎಂದರು.
ಇದನ್ನೂ ಓದಿ: ಡಿಸೆಂಬರ್ ವೇಳೆಗೆ ರಾಜ್ಯದ ಶೇ.50 ರಷ್ಟು ಅರ್ಹರಿಗೆ ಆಯುಷ್ಮಾನ್ ಕಾರ್ಡ್: ಸಚಿವ ಸುಧಾಕರ್