ಬೆಂಗಳೂರು: ಕೇಂದ್ರ ಸರ್ಕಾರದಿಂದ ಹಲವು ಉದ್ಯಮಿಗಳ ಸಾಲ ಮನ್ನಾ ಘೋಷಣೆ ಖಂಡಿಸಿ ಕಾಂಗ್ರೆಸ್ ವತಿಯಿಂದ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.
ಉದ್ಯಮಿಗಳಾದ ವಿಜಯ್ ಮಲ್ಯ, ಮೇಹುಲ್ ಚೋಕ್ಸಿ, ರಾಮದೇವ್ ಮುಂತಾದವರ ಸಾಲ ಮನ್ನಾ ಮಾಡಿದ್ದನ್ನು ಕಾಂಗ್ರೆಸ್ ಖಂಡಿಸಿದೆ. ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನ ಮುಂಭಾಗದ ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನಾ ಧರಣಿ ನಡೆಸಿದರು. ಮೂವರು ಉದ್ಯಮಿಗಳ ಪೋಸ್ಟರ್ ಹಿಡಿದುಕೊಂಡು ಮೌನ ಪ್ರತಿಭಟನೆ ನಡೆಸಲಾಯಿತು. ಉದ್ಯಮಿಗಳ ಸಾಲ ಮನ್ನಾ ಮಾಡಿದರೆ ಇನ್ನಷ್ಟು ಉದ್ಯಮಿಗಳು ಅಕ್ರಮ ನಡೆಸಿದರೂ ಬಚಾವಾಗಬಹುದು ಎನ್ನುವ ಸಂದೇಶ ನೀಡಿದಂತಾಗುತ್ತದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಮುಖಂಡ ಮನೋಹರ್ ಮಾತನಾಡಿ, ಪಕ್ಷದ ಹಿರಿಯ ನಾಯಕರಾದ ರಾಹುಲ್ ಗಾಂಧಿ ಉದ್ಯಮಿಗಳ ಸಾಲದ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದರು. ಈಗ ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿದೆ. ಇಂತಹ ಸಂದರ್ಭದಲ್ಲಿ 68 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇಕೆ? ಜನಸಾಮಾನ್ಯರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಆದರೆ ಉದ್ಯಮಿಗಳ ಪರವಾಗಿ ಸರ್ಕಾರ ವರ್ತಿಸುತ್ತಿದೆ ಎಂದು ಆರೋಪಿಸಿದರು.