ಬೆಂಗಳೂರು: ವಿಧಾನಸಭೆ ಉಪ ಚುನಾವಣೆ ಹಿನ್ನೆಲೆ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರ ಸಭೆ ಪ್ರಾರಂಭವಾಗಿದೆ. ಹಿರಿಯ ನಾಯಕರಾದ ವೀರಪ್ಪ ಮೊಯ್ಲಿ, ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್ ಖಾನ್ ಸಭೆಯಲ್ಲಿ ಭಾಗಿಯಾಗಿದ್ದಾರೆ.
17ರ ಪೈಕಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿರುವುದರಿಂದ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆಯುತ್ತಿದೆ. ಹಿರೇಕೆರೂರು, ಯಲ್ಲಾಪುರ, ಶಿವಾಜಿನಗರ ಸೇರಿ ಉಪ ಚುನಾವಣೆ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಸಂಬಂಧ ಮಹತ್ವದ ಚರ್ಚೆ ನಡೆಯುತ್ತಿದೆ.
ಗಮನಸೆಳೆದ ಪರಮೇಶ್ವರ್ ಉಪಸ್ಥಿತಿ :
ಪಕ್ಷದ ಚಟುವಟಿಕೆಯಿಂದ ಕೆಲದಿನಗಳಿಂದ ದೂರವೇ ಉಳಿದಿದ್ದ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಇಂದು ಸಭೆಗೆ ಆಗಮಿಸಿ ಗಮನ ಸೆಳೆದಿದ್ದಾರೆ. ಸಭೆಯ ಆರಂಭದಲ್ಲಿ ಕೂಡ ಅವರ ಉಪಸ್ಥಿತಿಯನ್ನು ಹೆಚ್ಚು ಪ್ರಸ್ತಾಪಿಸಲಾಯಿತು. ದಿಲ್ಲಿಗೆ ತೆರಳಿ ವಾಪಸಾಗಿರುವ ಪರಮೇಶ್ವರ್ ಇಂದು ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಬೆಳಗಾವಿ ಹೊರತುಪಡಿಸಿ ಉಪ ಚುನಾವಣೆ ನಡೆಯುವ ಎಲ್ಲಾ ಜಿಲ್ಲೆಗಳ ನಾಯಕರ ಜೊತೆ ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ದಿನೇಶ್ ಗುಂಡೂರಾವ್ ಚರ್ಚಿಸಲಿದ್ದಾರೆ.
ತಮ್ಮ ನಡುವಿನ ಜಗಳಕ್ಕೆ ಸಾಕ್ಷಿ ಕೇಳಿದ ಸಿದ್ದು-ಪರಂ :
ಕೆಪಿಸಿಸಿ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಜಿ. ಪರಮೇಶ್ವರ್ ನಡುವೆ ಮಾತುಕತೆ ನಡೆಯಿತು. ಸಭೆ ಪ್ರಾರಂಭದಲ್ಲಿ ಹೊರಗೆ ತೆರಳಿದ್ದ ಪರಮೇಶ್ವರ್ ಬರಲಿ ನಂತರ ಸಭೆ ನಡೆಸೋಣ ಎಂದ ಸಿದ್ದರಾಮಯ್ಯ, ಪರಮೇಶ್ವರ್ ಒಳಗೆ ಬಂದ ತಕ್ಷಣ ಕರೆದು ಪಕ್ಕದಲ್ಲೇ ಕೂರಿಸಿಕೊಂಡರು. ನಂತರ ಸಿದ್ದರಾಮಯ್ಯ, ನಮ್ಮ ನಿಮ್ಮ ನಡುವೆ ಏನೂ ಜಗಳವೇ ಇಲ್ವಲ್ಲ ಎಂದಾಗ, ನಾನೂ ನಮ್ಮ ಜಗಳಕ್ಕೆ ಸಾಕ್ಷಿ ಕೇಳುತ್ತಿದ್ದೇನೆ. ಯಾರೂ ಸಾಕ್ಷಿ ಕೊಡ್ತಿಲ್ಲ ಎಂದು ಡಾ. ಜಿ ಪರಮೇಶ್ವರ್ ಹೇಳಿದರು.