ಬೆಂಗಳೂರು: 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆಯುವ ಭಾಗವಾಗಿ ಹಲವು ಸಭೆಗಳನ್ನು ಕಾಂಗ್ರೆಸ್ ನಡೆಸುತ್ತಿದೆ. ಪಕ್ಷದ ನಾಯಕರು ಜನರ ಬಳಿ ತಲುಪಲು ವಿವಿಧ ಹಂತದಲ್ಲಿ ಪ್ರವಾಸ ಕೈಗೊಳ್ಳುವ ಅನಿವಾರ್ಯತೆ ಇರಲಿದೆ. ಅದಕ್ಕೆ ಸಂಬಂಧಿಸಿ ಕಾಂಗ್ರೆಸ್ ಪ್ರವಾಸ ಸಮಿತಿಯ ಸಭೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸೋಮವಾರ ನಡೆಯಿತು.
ಸಭೆಯಲ್ಲಿ ನಿರ್ಣಯಿಸಿದಂತೆ ಜನವರಿ 11 ರಿಂದ ರಾಜ್ಯ ಕಾಂಗ್ರೆಸ್ ನಾಯಕರು ಬಸ್ ಯಾತ್ರೆ ಆರಂಭಿಸಲಿದ್ದಾರೆ. ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕವೆಂದು ವಿಭಾಗ ಮಾಡಿಕೊಂಡು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಯಾತ್ರೆ ಕೈಗೊಳ್ಳಲಿದ್ದಾರೆ. ಚುನಾವಣೆ ದಿನಾಂಕ ಸಮೀಪಿಸುವವರೆಗೂ ರಾಜ್ಯದ ವಿವಿಧ ಕಡೆ ಕಾಂಗ್ರೆಸ್ ನಾಯಕರು ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮುಂದಿನ 100 ದಿನ ನಿರಂತರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಯಲಿದೆ.
ಕಾಂಗ್ರೆಸ್ ರಾಜ್ಯ ನಾಯಕರು ಒಂದು ಹಂತದಲ್ಲಿ ರಾಜ್ಯ ಪ್ರವಾಸ ಕೈಗೊಂಡರೆ ಸ್ಥಳೀಯವಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಆಯಾ ಭಾಗದ ಹಿರಿಯ ಮುಖಂಡರು, ಮಾಜಿ ಸಚಿವರು, ಶಾಸಕರು ಪ್ರತ್ಯೇಕವಾಗಿ ಯಾತ್ರೆಗಳನ್ನು ಕೈಗೊಳ್ಳುವ ಸಂಬಂಧವು ಇಂದು ಚರ್ಚಿಸಲಾಗಿದೆ. ಪ್ರವಾಸದ ಮೂಲಕ ನಿರಂತರವಾಗಿ ಮತದಾರರ ಸಂಪರ್ಕದಲ್ಲಿ ಕಾಂಗ್ರೆಸ್ ನಾಯಕರು ಇದ್ದು ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕೆಂಬ ಸೂಚನೆ ರವಾನಿಸಲು ತೀರ್ಮಾನ ಕೈಗೊಂಡಿದ್ದಾರೆ. ಕೈ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿಕೆಶಿ ತಮ್ಮ ಜವಾಬ್ದಾರಿಯನ್ನು ಮನಗಂಡು ಸ್ವತಂತ್ರವಾಗಿ ಪ್ರವಾಸ ಕಾರ್ಯಕ್ರಮದ ರೂಪರೇಷೆ ಹೆಣೆಯುವ ಅಧಿಕಾರ ಪಡೆದುಕೊಂಡಿದ್ದಾರೆ.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ರಾಮಲಿಂಗಾ ರೆಡ್ಡಿ, ಧ್ರುವನಾರಾಯಣ, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿ.ಕೆ.ಸುರೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕನ್ನಡ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಲು ಸರ್ಕಾರ ಬದ್ಧ: ಸಿಎಂ