ಬೆಂಗಳೂರು: ಸಚಿವ ಕೆ. ಎಸ್. ಈಶ್ವರಪ್ಪ ಬಂಧನವಾಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನೀಡುವುದಾಗಿ ತಿಳಿಸಿರುವ ಈಶ್ವರಪ್ಪ ಹೇಳಿಕೆಗೆ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಟಿ ನಡೆಸಿ ಪ್ರತಿಕ್ರಿಯೆ ನೀಡಿದರು. '24 ಗಂಟೆ ಆಹೋರಾತ್ರಿ ಧರಣಿ ನಡೆಸಲು ನಾವು ಈಗಾಗಲೇ ತೀರ್ಮಾನಿಸಿದ್ದೇವೆ. ಈಗ ಕೇವಲ ರಾಜೀನಾಮೆ ಘೋಷಣೆ ಮಾತ್ರ ಆಗಿದ್ದು ಈಶ್ವರಪ್ಪ ಬಂಧನ ಆಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ' ಎಂದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ನಾಳೆ ಸಂಜೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಈಶ್ವರಪ್ಪ ಹೇಳಿದ್ದಾರೆ. ರಾಜೀನಾಮೆ ಬಗ್ಗೆ ನಾನು ಹೆಚ್ಚು ಮಾತನಾಡಿಲ್ಲ. ಭ್ರಷ್ಟಾಚಾರದಿಂದ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ ಆರೋಪದಡಿ ಈಶ್ವರಪ್ಪ ಮೇಲೆ ಕೇಸ್ ಹಾಕ್ಬೇಕು ಎಂದು ಒತ್ತಾಯಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಈಶ್ವರಪ್ಪನವರು ಇಲ್ಲಿಯವರೆಗೂ ಸುಳ್ಳು ಹೇಳಿಕೊಂಡು ಬರುತ್ತಿದ್ದರು. ನಮ್ಮ ಹೋರಾಟ ಚುರುಕು ಆದ ಬಳಿಕ ನಾಳೆ ರಾಜೀನಾಮೆ ಕೊಡುವುದಾಗಿ ಅವರು ಘೋಷಣೆ ಮಾಡಿದ್ದಾರೆ. 40 ಪರ್ಸೆಂಟ್ ಕಮಿಷನ್ ಬೇಡಿಕೆಯನ್ನು ಈಶ್ವರಪ್ಪ ಕೇಳಿದ್ದಾರೆ ಎಂದು ಸಂತೋಷ ಪಾಟೀಲ್ ಆರೋಪ ಮಾಡಿದ್ದರು.
ಈಶ್ವರಪ್ಪಗೆ ಮಾಡಿರುವ ತಪ್ಪು ಈಗ ಅರಿವಾಗಿದೆ. ಸಂತೋಷ್ ಪಾಟೀಲ್ ಯೂರೋ ಗೊತ್ತಿಲ್ಲ ಎಂದು ಹೇಳಿದ್ದರು. ಸಂತೋಷ್ ಪಾಟೀಲ್ ಗೊತ್ತಿಲ್ದೇ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ರಾ? ಎರಡು ಬಾರಿ ಈಶ್ವರಪ್ಪ ಅವ್ರನ್ನು ಭೇಟಿ ಮಾಡಿದ್ದೇವೆ ಎಂದು ಅಲ್ಲಿನ ಗ್ರಾಮ ಪಂಚಾಯತಿ ಅಧ್ಯಕ್ಷರು ಹೇಳಿದ್ದರು. 40% ಕಮಿಷನ್ ಬಗ್ಗೆ ದೆಹಲಿ ನಾಯಕರ ಗಮನಕ್ಕೆ ತಂದಿದ್ದರು. ಬಿಲ್ ಕ್ಲಿಯರ್ ಮಾಡಿಲ್ಲ ಅಂದ್ರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತೆ ಎಂದು ಪತ್ರದಲ್ಲೂ ಕೂಡ ಸಂತೋಷ್ ಪಾಟೀಲ್ ಬರೆದಿದ್ದರು.
ಕಮಿಷನ್ ಕೇಳುವ ಬಗ್ಗೆ ಅವರ ಕುಟುಂಬ ಸದಸ್ಯರ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಈಶ್ವರಪ್ಪನವರೇ ನನ್ನ ಆತ್ಮಹತ್ಯೆಗೆ ಕಾರಣ ಎಂದು ವಾಟ್ಸ್ಆಪ್ನಲ್ಲಿ ಡೆತ್‌ನೋಟ್ ಕಳುಹಿಸಿದ್ದಾರೆ. ನಮ್ಮ ಹೋರಾಟ ರಾಜೀನಾಮೆ ಕೇಳುವುದು ಒಂದೇ ಅಲ್ಲ. ಭ್ರಷ್ಟಾಚಾರ ಸೆಕ್ಷನ್ 13ರ ಅಡಿ ಈಶ್ವರಪ್ಪ ಮೇಲೆ ಎಫ್ ಐ ಆರ್ ಹಾಕ್ಬೇಕು. ಈಶ್ವರಪ್ಪ ಅವ್ರನ್ನು ಕೂಡಲೇ ಬಂಧಿಸಬೇಕು. ಕಾನೂನು ಎಲ್ಲರಿಗೂ ಒಂದೇ ಅಲ್ವಾ? ಎಂದರು.
ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೆ. ಎಸ್. ಈಶ್ವರಪ್ಪ