ಬೆಂಗಳೂರು: ನಗರದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನಶಂಕರಿ ವಾರ್ಡ್ನಲ್ಲಿ ಇಂದು ಕಾಂಗ್ರೆಸ್ ನಾಯಕರು ಬಡವರಿಗೆ ಉಚಿತ ಅಕ್ಕಿ ಹಂಚಿಕೆ ಮಾಡಿದ್ದು, ಈ ವೇಳೆ ಸಾಮಾಜಿಕ ಅಂತರ ಮರೆತು ಜನರು ಅಕ್ಕಿಗಾಗಿ ಮುಗಿಬಿದ್ದಿದ್ದ ದೃಶ್ಯ ಕಂಡು ಬಂತು.
ಪದ್ಮನಾಭನಗರದ ಕದಿರೇನಹಳ್ಳಿ ಅಂಡರ್ ಪಾಸ್ ಸಮೀಪದ ಮೈದಾನದಲ್ಲಿ ವಾರ್ಡ್ನ ಕಾರ್ಪೋರೇಟರ್ ಅನ್ವರ್ ಪಾಷಾ, ಲಾಕ್ಡೌನ್ನಿಂದ ಬಳಲುತ್ತಿರುವ ಬಡ ಕಾರ್ಮಿಕರು, ಜನರಿಗೆ ಉಚಿತವಾಗಿ ಅಕ್ಕಿ ಹಂಚುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದಕ್ಕಾಗಿ 200 ಮಂದಿಯನ್ನು ಮೈದಾನದಲ್ಲಿ ಕೂರಿಸಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಬಾಕ್ಸ್ಗಳನ್ನು ಸಹ ಹಾಕಲಾಗಿತ್ತು. ಇದರಂತೆ ವ್ಯವಸ್ಥಿತವಾಗಿದ್ದಾಗ ಡಿ.ಕೆ.ಶಿವಕುಮಾರ್ ಬರುತ್ತಿದ್ದಂತೆ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಜನ ಅಕ್ಕಿ ಪಡೆಯಲು ಮುಗಿಬಿದ್ದರು. ಇದರಿಂದ ಕಂಗಾಲಾದ ಆಯೋಜನರು ಜನರನ್ನು ನಿಯಂತ್ರಿಸಲಾಗದೆ ಸುಸ್ತಾದ ದೃಶ್ಯಗಳು ಕಂಡು ಬಂದವು.
ಅಕ್ಕಿ ಮಾತ್ರವಲ್ಲದೆ, ಡಿಕೆಶಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬಿದ್ದರು. ಮೈದಾನದಲ್ಲಿ ಸುವ್ಯವಸ್ಥೆ ಕಾಪಾಡಲು ಕೇಲವ ಬೆರಳೆಣಿಕೆ ಪೊಲೀಸರನ್ನು ನಿಯೋಜನೆ ಮಾಡಿದ್ದರ ಪರಿಣಾಮ ಜನರನ್ನು ನಿಯಂತ್ರಿಸಲು ಸಾಧ್ಯವಾಗದೆ ಪೊಲೀಸರು, ಅಕ್ಕಿಯನ್ನು ಮನೆ ಮನೆಗೆ ತಲುಪಿಸುವಂತೆ ಸೂಚಿಸಿದರು. ಬಳಿಕ ಆಯೋಜಕರು, ಲಾರಿಗಳನ್ನು ಅಕ್ಕಿ ಮೂಟೆಗಳ ಸಮೇತ ಹೊರಗೆ ಕಳಿಸಿದರು.
ವಿತರಣಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕ ರಾಮಲಿಂಗಾರೆಡ್ಡಿ, ಕಾರ್ಪೋರೇಟರ್ ಅನ್ಸರ್ ಪಾಷಾ ಪಾಲ್ಗೊಂಡಿದ್ದರು.