ಬೆಂಗಳೂರು : ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೀಗ, ಗಲಭೆಯಲ್ಲಿ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತನೊಬ್ಬನ ಪಾತ್ರದ ಬಗ್ಗೆ ಮಹತ್ವದ ಮಾಹಿತಿ ದೊರೆತಿದೆ.
ಕಾಂಗ್ರೆಸ್ ಕಾರ್ಯಕರ್ತ ಫೈರೋಜ್ ಎಂಬಾತ ಮನೆಯಲ್ಲೇ ಕುಳಿತು ಗಲಭೆಗೆ ರೂಪುರೇಷೆ ಸಿದ್ಧಪಡಿಸಿ ವಾಟ್ಸ್ ಆ್ಯಪ್ ಕರೆ ಮೂಲಕ ಪ್ರಚೋದನೆ ನೀಡಿರುವ ವಿಚಾರ ಗೊತ್ತಾಗಿದೆ. ಗಲಭೆಯಲ್ಲಿ ನೇರವಾಗಿ ಭಾಗಿಯಾಗದಿದ್ದರೂ ಸಂಚಿನ ಕಿಂಗ್ ಪಿನ್ ಎಸ್ಡಿಪಿಐ ಮುಖಂಡ ಮುಜಾಮಿಲ್ ಪಾಷ ಎನ್ನಲಾಗಿದ್ದು, ಆತನ ವಿಚಾರಣೆ ವೇಳೆ ವಾಟ್ಸ್ ಆ್ಯಪ್ ಪರಿಶೀಲಿಸಿದಾಗ, ಫೈರೋಜ್ ಕರೆ ಮಾಡಿರುವ ವಿಚಾರ ತಿಳಿದು ಬಂದಿದೆ. ಸದ್ಯ, ತಾಂತ್ರಿಕ ವಿಭಾಗದಿಂದ ಫೈರೋಜ್ ಮೊಬೈಲ್ ಕಾಲ್ ಡಿಟೇಲ್ಸ್ ಪರಿಶೀಲನೆ ಮಾಡಲಾಗ್ತಿದ್ದು, ಈತ ಸಾಕಷ್ಟು ಮಂದಿಗೆ ಕರೆ ಮಾಡಿರುವ ಮಾಹಿತಿ ಹೊರ ಬರುತ್ತಿವೆ.
ಕಾಂಗ್ರೆಸ್ ರಾಷ್ಟ್ರ, ರಾಜ್ಯ ನಾಯಕರ ಜೊತೆ ಗುರುತಿಸಿಕೊಂಡಿದ್ದ ಫೈರೋಜ್, ಕೊರೊನಾ ವಾರಿಯರ್ ಮತ್ತು ಸಿವಿಲ್ ಡಿಫೆನ್ಸ್ ಆಗಿಯೂ ಸಕ್ರಿಯವಾಗಿ ತೊಡಗಿಕೊಂಡಿದ್ದ. ಸದ್ಯ, ಗಲಭೆಯ ಪ್ರಕರಣದಲ್ಲಿ ಎ-3(ಆರೋಪಿ ಸಂಖ್ಯೆ) ಆಗಿ ಈತನ ವಿರುದ್ಧ ಕೆ.ಜಿ ಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಈತ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಪ್ರಮುಖ ಕೈ ನಾಯಕರ ಜೊತೆ ತೆಗೆಸಿಕೊಂಡಿರುವ ಫೋಟೋ ಈಗ ಎಲ್ಲೆಡೆ ಹರಿದಾಡುತ್ತಿದೆ.