ಬೆಂಗಳೂರು: ಮಂಡ್ಯದಲ್ಲಿ ರಸ್ತೆಗುಂಡಿಗೆ ನಿವೃತ್ತ ಯೋಧ ಬಲಿಯಾಗಿರುವುದನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತೀವ್ರವಾಗಿ ಖಂಡಿಸಿದ್ದಾರೆ. ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿರುವ ಅವರು, ಪಾತ್ ಹೋಲ್ ಸರ್ಕಾರ ನಿವೃತ್ತ ಯೋಧನ ಬಲಿ ಪಡೆದಿದೆ. ಬಿಜೆಪಿ ಸರ್ಕಾರ 40% ರಷ್ಟು ಕನ್ನಡಿಗರನ್ನು ಕೈಯಾರೆ ಬಲಿ ಪಡೆಯುತ್ತಿದೆ. ಕರ್ನಾಟಕಕ್ಕೆ ಮೋದಿ ಭೇಟಿ ನೀಡುವ ವೇಳೆ ಬೊಮ್ಮಾಯಿ ಸರ್ಕಾರ 10 ಕೋಟಿ ರೂ. ಖರ್ಚು ಮಾಡಿದೆ. ಹಾಗಿದ್ದರೆ ರಸ್ತೆ ಗುಂಡಿ ಮುಚ್ಚಲು ಸರ್ಕಾರದ ಬಳಿ ಹಣವಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸಹ ಟ್ವೀಟ್ ಮಾಡಿದ್ದು, "ರಸ್ತೆ ಗುಂಡಿಗಳಿಂದ ಬೇಸತ್ತು ಮಕ್ಕಳು ಕೂಡ ಗುಂಡಿ ಮುಚ್ಚಲು ಕೇಳುತ್ತಿದ್ದಾರೆ. ಆದರೆ ಸಿಎಂ ಮಾತ್ರ ಕಣ್ಮುಚ್ಚಿಕೊಂಡು ಕುಳಿತಿದ್ದಾರೆ. ಸಿಎಂ ಅಂಕಲ್ ಬಸವರಾಜ ಬೊಮ್ಮಾಯಿ ಅವರೇ, ಕಳೆದ ಒಂದೂವರೆ ವರ್ಷದಿಂದ ರಸ್ತೆಗುಂಡಿಗಳ ಬಗ್ಗೆ ಗಮನ ಸೆಳೆಯುತ್ತಿದ್ದರೂ ಎಚ್ಚರಾಗದಿರುವುದೇಕೆ? ಜನರ ಜೀವ ತೆಗೆಯುತ್ತಿರುವುದೇಕೆ? ಇಷ್ಟೊಂದು ಅಸಮರ್ಥ ಸಿಎಂ ಬೇರೆ ಕಂಡಿಲ್ಲ" ಎಂದಿದೆ.
ಸರ್ಕಾರಿ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ಬಣ್ಣ ಬಳಿಯುವುದು, ಧ್ಯಾನ ಮಾಡಿಸುವುದಕ್ಕಿಂತ ಮೊದಲು ಶಾಲೆಗಳ ಮೂಲ ಸೌಕರ್ಯ ಕೊರತೆಯತ್ತ ಸರ್ಕಾರ ಗಮನಿಸುವುದಿಲ್ಲವೇಕೆ? ಕಲಿಕೆಯ ಗುಣಮಟ್ಟ ಹೆಚ್ಚಿಸಲು ಮಕ್ಕಳು ಮನವಿ ಮಾಡುತ್ತಿದ್ದಾರೆ. ಆದರೆ ಶಿಕ್ಷಣ ಸಚಿವರಿಗೆ ಕೇಸರಿ ಬಣ್ಣದ್ದೇ ಚಿಂತೆ! ಸಿಎಂ ಅಂಕಲ್, ಮಕ್ಕಳ ಬೇಡಿಕೆಗಳನ್ನು ಈಡೇರಿಸುವುದರಲ್ಲಿ ಆಸಕ್ತಿ ಇಲ್ಲವೇಕೆ?. ಅದಲ್ಲದೇ, ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ಹತ್ತಾರು ಕಿಲೋಮೀಟರ್ ದೂರದ ಶಾಲೆಗೆ ಹೋಗಬೇಕಿದೆ. ಸರ್ಕಾರದ ಸೈಕಲ್ ಇಲ್ಲ. ನಡೆಯಲು ಶೂ ಕೂಡ ಕೊಡಲಿಲ್ಲ, ಬಸ್ಸುಗಳು ಬರುವುದಿಲ್ಲ. ಸಿಎಂ ಅಂಕಲ್ ರಾಜ್ಯದ ಮಕ್ಕಳ ಬೇಡಿಕೆಗಳಿಗೆ ಸ್ಪಂದಿಸುವ ಮನಸು ನಿಮ್ಮ ಸರ್ಕಾರಕ್ಕೆ ಇಲ್ಲವೇ? ಎಂದು ಪ್ರಶ್ನಿಸಿದೆ.
ಮೈದಾನದ ಪಕ್ಕದಲ್ಲೇ ಇರುವ ಶಾಲೆಯನ್ನು ಅಭಿವೃದ್ಧಿಪಡಿಸದೆ ಆಟದ ಮೈದಾನದಲ್ಲೇ ಹೊಸ ಶಾಲೆ ನಿರ್ಮಿಸುವ ಯೋಜನೆ ಏಕೆ? ಹೊಸ ಶಾಲೆ ನಿರ್ಮಾಣದಲ್ಲಿ 40% ಕಮಿಷನ್ ಹೊಡೆಯುವ ಹುನ್ನಾರವೇ? ಆಟದ ಮೈದಾನ ಉಳಿಸಿಕೊಡಿ ಎಂಬ ಮಕ್ಕಳ ಮನವಿಗೆ ಸಿಎಂ ಅಂಕಲ್ ಸ್ಪಂದಿಸುತ್ತಿಲ್ಲವೇಕೆ? ಮಕ್ಕಳ ದಿನಾಚರಣೆಯಂದು ಮಕ್ಕಳ ಸಂಕಟಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವೇಕೆ? ಶಾಲೆ ಶುರುವಾಗಿ ಅರ್ಧ ವರ್ಷ ಕಳೆದರೂ ಪಠ್ಯಪುಸ್ತಕದ ಗೊಂದಲ ಬಗೆಹರಿಸಲಿಲ್ಲ, ಮಕ್ಕಳಿಗೆ ಪಠ್ಯಪುಸ್ತಕ ನೀಡಲಿಲ್ಲ. ಸಿಎಂ ಅಂಕಲ್ ಮಕ್ಕಳು ಏನನ್ನ ಓದಬೇಕು, ಪರೀಕ್ಷೆಗೆ ಹೇಗೆ ಸಜ್ಜಾಗಬೇಕು? ನೀವು ಪುಸ್ತಕ ಕೊಡುವುದೆಂದು? ರಾಜ್ಯಾದ್ಯಂತ ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ, ಶೌಚಾಲಯವಿಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ. ಸಿಎಂ ಅಂಕಲ್, ಕೇಸರಿ ಬಣ್ಣ ಬಳಿಯುವಿರಂತೆ, ಆದರೆ ಮೊದಲು ಶೌಚಾಲಯ ಕಟ್ಟಿಸಿಕೊಡಿ. ಕುಡಿಯಲು ಶುಚಿಯಾದ ನೀರು ಕೊಡಿ, ಶಾಲೆಗಳು ಮಕ್ಕಳನ್ನು ಆಕರ್ಷಿಸುವಂತೆ ಮಾಡಿಕೊಡಿ ಎಂದು ಮನವಿ ಮಾಡಿದೆ.
ಸಿಎಂ ಅಂಕಲ್ ಸಮರ್ಪಕವಾಗಿ ಮೊಟ್ಟೆ ವಿತರಣೆಗೆ ಕ್ರಮ ಕೈಗೊಳ್ಳಿ, ಅನುದಾನ ಬಿಡುಗಡೆ ಮಾಡಿ. ಮೊಟ್ಟೆಯಲ್ಲೂ ಭ್ರಷ್ಟಾಚಾರಕ್ಕೆ ಅವಕಾಶ ಕೊಡಬೇಡಿ. ಬಡ ಮಕ್ಕಳ ಶಿಕ್ಷಣಕ್ಕೆ ಬಡತನ, ಹಸಿವು ಅಡ್ಡಿಯಾಗಬಾರದು ಎಂಬ ದೃಷ್ಟಿಯಲ್ಲಿ ಜಾರಿಗೆ ತಂದ ಬಿಸಿಯೂಟ ಯೋಜನೆಗೆ ಅನುದಾನ ನೀಡದೆ ಅನ್ಯಾಯ ಮಾಡುತ್ತಿದೆ. ಒಳ್ಳೆಯ ಪಾಠವೂ ಇಲ್ಲ. ಬಿಸಿ ಊಟವೂ ಇಲ್ಲ. ಊಟ, ಪಾಠದ ಸಮಸ್ಯೆ ಬಗೆಹರಿಸಲು ಯಾವ ಕ್ರಮ ಕೈಗೊಳ್ಳುವಿರಿ ಸಿಎಂ ಅಂಕಲ್ ? ಎಂದು ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ: ಮೊದಲು ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಕಾಂಗ್ರೆಸ್ ಕ್ಯಾಂಪೇನ್