ಬೆಂಗಳೂರು: ಮುಂಬರುವ ದಿನಗಳಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಕುಸಿತ ಕಾಣಲಿದ್ದು, ಕಾಂಗ್ರೆಸ್ಗೆ ಉತ್ತಮ ಭವಿಷ್ಯವಿದೆ ಎಂದು ಕೇಂದ್ರದ ಮಾಜಿ ಸಚಿವ ಡಾ. ಎಂ ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶದ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಅತ್ಯಾಚಾರ ಪ್ರಕರಣಗಳು, ಹತ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಯೋಗಿ ನೇತೃತ್ವದ ಸರ್ಕಾರದ ಮೇಲಿನ ವಿಶ್ವಾಸವನ್ನು ಜನ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಜನಪ್ರಿಯತೆ ಸಿಗುವ ನಿರೀಕ್ಷೆ ಇದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಪ್ರಿಯಾಂಕಾ ವಾದ್ರಾ ಅವರು ಯೋಗಿ ಆದಿತ್ಯನಾಥ್ ಗಿಂತಲೂ ಹೆಚ್ಚಿನ ಜನಪ್ರಿಯತೆ ಹೊಂದಿದ್ದಾರೆ ಎಂದರು.
ವಾದ್ರಾ ಅವರು ದಿನದಿಂದ ದಿನಕ್ಕೆ ಜನರ ವಿಶ್ವಾಸವನ್ನು ಗಳಿಸುತ್ತಿದ್ದಾರೆ. ಉತ್ತರ ಪ್ರದೇಶದ ಜನತೆ ಯೋಗಿ ಆದಿತ್ಯನಾಥ್ ಗಿಂತಲೂ ಪ್ರಿಯಾಂಕಾ ವಾದ್ರಾ ಅವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಉತ್ತರಪ್ರದೇಶದಲ್ಲಿ ಪಕ್ಷ ಅತ್ಯಂತ ಪ್ರಬಲವಾಗಿದೆ ಎಂಬ ಭ್ರಮೆಯಲ್ಲಿ ಬಿಜೆಪಿ ನಾಯಕರು ಇದ್ದಾರೆ. ಆದರೆ ನೋಟು ಅಮಾನ್ಯೀಕರಣ ಹಾಗೂ ಜಿಎಸ್ಟಿ ಜಾರಿ ಪ್ರಭಾವದಿಂದಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇದರಿಂದಾಗಿ ಜನ ಬೇಸತ್ತಿದ್ದು, ಹೆಚ್ಚುದಿನ ಯೋಗಿ ಆದಿತ್ಯನಾಥ್ ನೇತೃತ್ವದ ಅಧಿಕಾರ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಕೇವಲ ಘೋಷಣೆಗಳಿಂದ ಜನರನ್ನು ಸೆಳೆಯಲು ಅಥವಾ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಎಲ್ಲೋ ಒಮ್ಮೆ ಮಾಡಬಹುದೇ ಹೊರತು ಪದೇಪದೇ ಮಾಡಿ ಯಶಸ್ವಿಯಾಗಲು ಸಾಧ್ಯವಿಲ್ಲ. ಇಂದು ಉತ್ತರ ಪ್ರದೇಶದ ಜನ ಪ್ರಿಯಾಂಕ ಅವರಲ್ಲಿ ಇಂದಿರಾಗಾಂಧಿಯನ್ನು ಕಾಣುತ್ತಿದ್ದಾರೆ. ಅಲ್ಲದೆ ಯೋಗಿ ಆದಿತ್ಯನಾಥ್ ಗೆ ಹೋಲಿಸಿದರೆ ಪ್ರಿಯಾಂಕಾ ವಾದ್ರಾ ಅವರ ಜನಪ್ರಿಯತೆ ಇನ್ನೂ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.