ಬೆಂಗಳೂರು: ಸೂಕ್ತ ಸಂದರ್ಭದಲ್ಲಿ ಯೋಗ್ಯ ವ್ಯಕ್ತಿಯನ್ನು ರಾಜ್ಯಾಧ್ಯಕ್ಷರನ್ನಾಗಿ ಹೈಕಮಾಂಡ್ ಆಯ್ಕೆ ಮಾಡಿದೆ. ಬಿ ವೈ ವಿಜಯೇಂದ್ರ ಅಧಿಕಾರ ಸ್ವೀಕಾರ ಮಾಡುವ ಮುನ್ನವೇ ಕಾಂಗ್ರೆಸ್ಗೆ ನಡುಕ ಶುರುವಾಗಿದೆ ಎಂದು ಕುಟುಂಬ ರಾಜಕಾರಣದ ಬಗ್ಗೆ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರಿಗೆ ಮಾಜಿ ಸಚಿವ ಸಿ ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ಡಾಲರ್ಸ್ ಕಾಲೊನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಅಭಿನಂದಿಸಿ ಮಾತನಾಡಿದ ಸಿ ಸಿ ಪಾಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆಯನ್ನೂ ಕಾಂಗ್ರೆಸ್ ಟೀಕೆ ಮಾಡಿದೆ. ಆದರೆ ನಮ್ಮ ಹೈಕಮಾಂಡ್ ಸೂಕ್ತ ವ್ಯಕ್ತಿಯನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದೆ. ಕಾಂಗ್ರೆಸ್ಗೆ ವಿಜಯೇಂದ್ರ ಹೆಸರು ಘೋಷಣೆಯಿಂದ ನಡುಕ ಶುರುವಾಗಿದೆ. ಇನ್ನೂ ವಿಜಯೇಂದ್ರ ಅಧಿಕಾರ ಸ್ವೀಕರಿಸಿಲ್ಲ, ಆಗಲೇ ಕಾಂಗ್ರೆಸ್ಗೆ ನಡುಕ ಉಂಟಾಗಿದೆ. ಹೀಗಾಗಿ ಕುಟುಂಬ ರಾಜಕಾರಣ ಅಂತ ಕಾಂಗ್ರೆಸ್ ಆರೋಪಿಸುತ್ತಿದೆ ಎಂದು ಟಾಂಗ್ ನೀಡಿದ್ದಾರೆ.
ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ಆಂತರಿಕ ವಿಚಾರವಾಗಿದೆ, ವಿಜಯೇಂದ್ರ ಕಳೆದ ಹಲವು ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಪಕ್ಷದ ಉಪಾಧ್ಯಕ್ಷ ಆಗಿದ್ದವರು, ಅವರಿಗೆ ಅವರು ಯಡಿಯೂರಪ್ಪ ಮಗ ಅಂತ ಹೆಮ್ಮೆ ಇದೆ ಎಂದು ವಿಜಯೇಂದ್ರ ಆಯ್ಕೆಯನ್ನು ಸಮರ್ಥಿಸಿಕೊಂಡರು.
ಪಕ್ಷದಲ್ಲಿ ಕೆಲ ಹಿರಿಯರಿಗೆ ಅಸಮಾಧಾನವಾಗಿರುವ ಕುರಿತು ಪ್ರತಿಕ್ರಿಯಿಸಿದ ಸಿ ಸಿ ಪಾಟೀಲ್, ಸಹಜವಾಗಿ ಅಸಮಾಧಾನ ಇದ್ದೇ ಇರುತ್ತದೆ, ಸೋಮಣ್ಣ ರಾಜ್ಯಾಧ್ಯಕ್ಷ ಹುದ್ದೆ ಬಯಸಿದ್ದರು. ಅಸಮಾಧಾನ ಸಹಜ. ಮುಂದಿನ ದಿನಗಳಲ್ಲಿ ಅಸಮಾಧಾನ ಮರೆಯಾಗಿ ಎಲ್ಲರೂ ವಿಜಯೇಂದ್ರಗೆ ಕೈಜೋಡಿಸ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವೈಜ್ಞಾನಿಕ ಅಂಶಗಳ ಆಧಾರದಲ್ಲಿ ಜಾತಿಗಣತಿ ಸಮೀಕ್ಷೆ ಆಗಲಿ: ಜಾತಿ ಜನಗಣತಿ ಅವೈಜ್ಞಾನಿಕ ಆಗಿದೆ, ವರದಿ ಸಮಂಜಸ ಆಗಿಲ್ಲ ವರದಿಗೆ ಕಾಂಗ್ರೆಸ್ ಪಕ್ಷದಲ್ಲೇ ಹಿರಿಯರ ವಿರೋಧ ಇದೆ ಜಾತಿಜನಗಣತಿ ವರದಿಗೆ ಲಿಂಗಾಯತ, ಒಕ್ಕಲಿಗ ಸಮುದಾಯಗಳ ವಿರೋಧ ಇದೆ. ಇನ್ನೂ ಸಮಯ ಇದ್ದು, ಸಿದ್ದರಾಮಯ್ಯನವರು ವೈಜ್ಞಾನಿಕ ಅಂಶಗಳ ಆಧಾರದಲ್ಲಿ ಹೊಸ ಸಮೀಕ್ಷೆ ಮಾಡಿಸಬೇಕು. ಈಗ ಇರುವ ವರದಿಯನ್ನು ಸ್ವೀಕಾರ ಮಾಡಬಾರದೆಂದು ಎಂದು ಮಾಜಿ ಸಚಿವ ಸಿ ಸಿ ಪಾಟೀಲ್ ಆಗ್ರಹಿಸಿದ್ದಾರೆ.
ಪ್ರತಿಕ್ರಿಯೆ ನೀಡದ ಸೋಮಣ್ಣ, ಯತ್ನಾಳ್, ಬೆಲ್ಲದ್; ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರಗೆ ಬಿಎಸ್ವೈ ಆಪ್ತರು, ಪಕ್ಷ ನಿಷ್ಠರು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಆದರೆ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದವರು ಮಾತ್ರ ಯಾವ ಪ್ರತಿಕ್ರಿಯೆ ನೀಡದೆ ಅಸಮಾಧಾನಗೊಂಡಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ವಿ ಸೋಮಣ್ಣ ಗರಂ ಆಗಿದ್ದು, ಅವಕಾಶ ಕೈತಪ್ಪಿದ್ದಕ್ಕೆ ಸಿಡಿಮಿಡಿಗೊಂಡಿದ್ದಾರೆ. ಶುಕ್ರವಾರ ವಿಜಯನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಸಿಟ್ಟಿನಲ್ಲೇ ತೆರಳಿದ್ದರು.
ಇನ್ನು ಮತ್ತೊಂದು ಕಡೆ ಶಾಸಕ ಅರವಿಂದ ಬೆಲ್ಲದ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಾರಿಗೂ ಸಿಕ್ಕಿಲ್ಲ, ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ ಮಾಜಿ ಸಚಿವ ಸಿ ಟಿ ರವಿ ಪ್ರತಿಕ್ರಿಯೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತಿದೆ, ನಿಗೂಢ ಅರ್ಥ ಬರುವಂತೆ ನಿನ್ನೆ ಪ್ರತಿಕ್ರಿಯೆ ನೀಡಿದ್ದರು. ಪಕ್ಷದಲ್ಲಿ ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಎಂದಷ್ಟೇ ಹೇಳಿದ್ದರು.
ಇದನ್ನೂಓದಿ:ನ.15 ರಂದು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕಾರ: ಬಿ.ವೈ ವಿಜಯೇಂದ್ರ