ಬೆಂಗಳೂರು : ಬಿಜೆಪಿ ಹೈಕಮಾಂಡ್ನಿಂದ ಬಿ ಎಸ್ ಯಡಿಯೂರಪ್ಪಗೆ ಅಪಮಾನ ಆಗಿದೆ ಎಂಬ ವಿಚಾರವನ್ನ ಮುಂದಿರಿಸಿ ಲಿಂಗಾಯತ ಸಮುದಾಯದ ಮತದಾರರನ್ನು ಸೆಳೆಯಲು ತಂತ್ರಗಾರಿಕೆ ರೂಪಿಸಿದ್ದ ಕಾಂಗ್ರೆಸ್ಗೆ, ಬಸವರಾಜ್ ಬೊಮ್ಮಾಯಿ ಆಯ್ಕೆ ಭಾರಿ ಹಿನ್ನಡೆ ಉಂಟು ಮಾಡಲಿದೆ ಎಂಬ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗ್ತಿದೆ.
ನಾಲ್ಕು ದಶಕಕ್ಕಿಂತಲೂ ಹೆಚ್ಚು ಕಾಲ ಬಿಜೆಪಿ ಪಕ್ಷ ಕಟ್ಟಿ ದಕ್ಷಿಣದಲ್ಲಿ ಅಧಿಕಾರಕ್ಕೆ ತಂದ ಬಿ ಎಸ್ ಯಡಿಯೂರಪ್ಪಗೆ ಮೂರು ದಶಕಗಳಿಂದ ಲಿಂಗಾಯತ ಸಮುದಾಯದ ಬೇಷರತ್ ಬೆಂಬಲ ಲಭಿಸಿದೆ. ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಂತೂ ಬಹುತೇಕ ಲಿಂಗಾಯತರು ಬಿಜೆಪಿ ಕೈ ಹಿಡಿದಿದ್ದರು. ಶೇ.16ರಷ್ಟು ರಾಜ್ಯದ ಮತದಾರರನ್ನು ಹೊಂದಿರುವ ಲಿಂಗಾಯತರು ಹಲವು ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದ್ದಾರೆ.
ಕಾಂಗ್ರೆಸ್ ಪಾಲಿಗೆ ನುಂಗಲಾರದ ಬಿಸಿ ತುಪ್ಪ : ಉತ್ತರ ಕರ್ನಾಟಕ ಭಾಗದಲ್ಲಂತೂ ಪ್ರಾಬಲ್ಯ ಹೊಂದಿರುವ ಲಿಂಗಾಯತ ಸಮುದಾಯವನ್ನು ಶತಾಯಗತಾಯ ಕಾಂಗ್ರೆಸ್ನತ್ತ ಸೆಳೆಯುವ ಪ್ರಯತ್ನ ನಿರಂತರವಾಗಿ ವಿಫಲವಾಗುತ್ತಲೇ ಬಂದಿದೆ. ಇದೀಗ ಹೈಕಮಾಂಡ್ನಿಂದ ಬಿಎಸ್ವೈಗೆ ಅನ್ಯಾಯವಾಗಿದೆ ಎಂಬ ವಿಚಾರ ಮುಂದಿಟ್ಟು ಲಿಂಗಾಯತ ಸಮುದಾಯವನ್ನು ಸೆಳೆಯುವ ಮೂಲಕ ಪ್ರಬಲ ಸಮುದಾಯವನ್ನು ತಮ್ಮದಾಗಿಸಿಕೊಳ್ಳುವ ಯತ್ನಕ್ಕೆ ಕಾಂಗ್ರೆಸ್ ಮುಂದಾಗಿತ್ತು. ಆದರೆ, ಬಿಎಸ್ವೈ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಸಿಎಂ ಪಟ್ಟ ಕಟ್ಟಿರುವುದು ಕಾಂಗ್ರೆಸ್ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಮತ ಚದುರಿಲ್ಲ : ಒಂದೆಡೆ ಬಿಜೆಪಿ ಜೊತೆಗಿದ್ದ ಸಮುದಾಯದ ಮತ ಚದುರದಂತೆ ನೋಡಿಕೊಳ್ಳಲಾಗಿದೆ. ಜೊತೆಗೆ ಸರ್ವಪಕ್ಷಗಳ ಜೊತೆಗೂ ಉತ್ತಮ ಬಾಂಧವ್ಯ ಹೊಂದಿರುವ ವ್ಯಕ್ತಿಯನ್ನು ಸಿಎಂ ಸ್ಥಾನದಲ್ಲಿ ಕೂರಿಸಲಾಗಿದೆ. ಬಿ ಎಸ್ ಯಡಿಯೂರಪ್ಪ ಮಾರ್ಗದರ್ಶನದಲ್ಲೇ ಮುನ್ನಡೆಯುವ ಹೇಳಿಕೆ ನೀಡುವ ಮೂಲಕ ಲಿಂಗಾಯತ ಮತದಾರರ ದೃಷ್ಟಿಯಲ್ಲಿ ಬಸವರಾಜ್ ಬೊಮ್ಮಾಯಿ ದೊಡ್ಡ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಬಿಎಸ್ವೈ ಬಿಜೆಪಿಗೆ ಅನಿವಾರ್ಯ : ಯಡಿಯೂರಪ್ಪಗೆ ಅವಮಾನವಾಗಿದೆ ಎಂಬ ರೀತಿಯ ಯಾವ ಲಕ್ಷಣವೂ ಸದ್ಯ ರಾಜ್ಯ ಬಿಜೆಪಿಯಲ್ಲಿ ಗೋಚರಿಸುತ್ತಿಲ್ಲ. ಬಸವರಾಜ್ ಬೊಮ್ಮಾಯಿ ಬೆನ್ನಿಗೆ ನಿಂತು ಸರ್ಕಾರ ಮುನ್ನಡೆಸುವ ಹಾಗೂ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪವನ್ನು ಬಿ ಎಸ್ ಯಡಿಯೂರಪ್ಪ ಮಾಡಿದ್ದಾರೆ. ಬೊಮ್ಮಾಯಿ ಮುಖ್ಯಮಂತ್ರಿ ಎಂದು ಘೋಷಣೆ ಯಾಗುವವರೆಗೂ ಹೈಕಮಾಂಡ್ನಿಂದ ಬಿಎಸ್ವೈ ನಿರ್ಲಕ್ಷಿತರಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ, ಆಯ್ಕೆಯ ನಂತರ ಈಗಲೂ ಬಿ ಎಸ್ ಯಡಿಯೂರಪ್ಪ ರಾಜ್ಯ ಬಿಜೆಪಿಗೆ ಅನಿವಾರ್ಯ ಎಂಬ ಮನವರಿಕೆ ಆಗಿದೆ. ಪಕ್ಷದ ಹೈಕಮಾಂಡ್ ಸಹ ಬಿಎಸ್ವೈ ಮೀರಿ ನಡೆದಿಲ್ಲ ಎಂಬ ಸಂದೇಶ ರವಾನೆಯಾಗಿದೆ.
ಕಾಣದ ವ್ಯತ್ಯಾಸ : ವೀರೇಂದ್ರ ಪಾಟೀಲ್ಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ ಎಂಬ ಕಾರಣಕ್ಕೆ ಕಳೆದ ಮೂರು ದಶಕಗಳಿಂದ ಲಿಂಗಾಯತ ಸಮುದಾಯ ದಂಡಿಯಾಗಿ ಆ ಪಕ್ಷದ 'ಕೈ'ಹಿಡಿದಿಲ್ಲ. ಮೊದಲು ಜನತಾ ಪರವಾರದತ್ತ ವಾಲಿದ್ದ ಆ ಸಮುದಾಯ ಈಗ ಬಿಜೆಪಿ ಬೆನ್ನಿಗೆ ನಿಂತಿದೆ. ಇದೀಗ ಅವರನ್ನು ಸೆಳೆಯುವ ಒಂದು ಪ್ರಯತ್ನವೂ ಸಹ ಬಸವರಾಜ್ ಬೊಮ್ಮಾಯಿ ಆಯ್ಕೆ ಮೂಲಕ ಕಾಂಗ್ರೆಸ್ ಪಾಲಿಗೆ ದಕ್ಕದಂತಾಗಿದೆ.
ಬಿ ಎಸ್ ಯಡಿಯೂರಪ್ಪ ವಿಶ್ವಾಸದಲ್ಲಿ ಉಳಿಸಿಕೊಂಡು ಹೈಕಮಾಂಡ್ ಕೈಗೊಂಡ ನಿರ್ಧಾರ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಹಾಗೂ ಮತದಾರ ಸಮುದಾಯದಲ್ಲಿ ಯಾವುದೇ ವ್ಯತ್ಯಾಸ ಬಾರದಂತೆ ಮಾಡಿದೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಲಿಂಗಾಯತ ಸಮುದಾಯವನ್ನು ಸೆಳೆಯುವ ಕಾಂಗ್ರೆಸ್ಗೆ ಮತ್ತೊಂದು ಯತ್ನವೂ ಕೈಗೂಡಲಿಲ್ಲ. ಇದೀಗ ಇನ್ನೊಂದು ಅವಕಾಶಕ್ಕಾಗಿ ಮತ್ತಷ್ಟು ದಿನ ಕಾಯಲೇಬೇಕಾದ ಅನಿವಾರ್ಯ ಎದುರಾಗಿದೆ.
ಓದಿ: ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಹೊಸ ಶಿಷ್ಯವೇತನ ಘೋಷಿಸಿದ ನೂತನ ಸಿಎಂ