ಬೆಂಗಳೂರು : ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅತ್ಯಂತ ಮಹತ್ವಾಕಾಂಕ್ಷೆಯಿಂದ ಸಿದ್ಧಪಡಿಸಿ ಜಾರಿಗೆ ತರಲು ಉದ್ದೇಶಿಸಿದ್ದ ಜಾತಿ ಜನಗಣತಿ ವರದಿಗೆ ಪಕ್ಷದ ಹೈಕಮಾಂಡ್ ಅಡ್ಡಗಾಲು ಹಾಕಿದ್ದು ಹಳೆಯ ಸುದ್ದಿ. ಇದೀಗ ಕಾಂಗ್ರೆಸ್ ಪಕ್ಷ ವರದಿ ಬಿಡುಗಡೆಗೆ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಲು ತೀರ್ಮಾನಿಸಿದೆ.
2013ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಸಿದ್ದರಾಮಯ್ಯನವರ ಜಾತಿ ಜನಗಣತಿ ವರದಿ ಸಿದ್ಧಪಡಿಸಲು ಒಂದು ಸಮಿತಿ ರಚಿಸಿ, ಅದಕ್ಕೆ ಕಾಂತರಾಜು ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಸರಿಸುಮಾರು 175 ಕೋಟಿ ರೂ. ವೆಚ್ಚದಲ್ಲಿ ವರದಿ ಕೂಡ ಸಿದ್ಧವಾಗಿತ್ತು. ಆದರೆ, ವರದಿ ಬಿಡುಗಡೆಗೂ ಮುನ್ನವೇ ಮಾಧ್ಯಮಗಳಿಗೆ ಸೋರಿಕೆ ಆದ ಹಿನ್ನೆಲೆ ವರದಿಯಲ್ಲಿರುವ ಅಂಶ ಬಹಿರಂಗಗೊಂಡಿತ್ತು.
ಸಿದ್ದರಾಮಯ್ಯ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದರಲ್ಲಿದ್ದ ಸಂದರ್ಭದಲ್ಲಿ ಸಿದ್ಧವಾದ ವರದಿ, ಮುಂಬರುವ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂಬ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್ ವರದಿ ಬಿಡುಗಡೆಯನ್ನು ತಡೆ ಹಿಡಿಯುವಂತೆ ಸೂಚಿಸಿತು. ಆದರೆ, ಸೋರಿಕೆಗೆ ಸೀಮಿತವಾದ ವರದಿಯನ್ನು ಮುಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಮರೆತೇ ಬಿಟ್ಟಿತ್ತು. ಇದೀಗ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದು, ವರದಿ ಬಿಡುಗಡೆ ಮಾಡುವುದಿಲ್ಲ ಎಂದು ತಿಳಿಸಿದೆ.
ಡಿಸಿಎಂ ಗೋವಿಂದ ಕಾರಜೋಳ ಅವರು ಜಾತಿ ಜನಗಣತಿ ವರದಿಯನ್ನು ಅಂಗೀಕರಿಸುವ ಮತ್ತು ತಿರಸ್ಕರಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ನಾವು ಈ ವರದಿಯನ್ನು ನೋಡೇ ಇಲ್ಲ. ಹಿಂದಿನ ಸರ್ಕಾರ ಏನು ಮಾಡಿದೆ ಎಂದೂ ಗೊತ್ತಿಲ್ಲ. ಸದ್ಯಕ್ಕೆ ಆ ವರದಿ ವಿಷಯ ಹೆಚ್ಚು ಗೊತ್ತಿಲ್ಲದೆ ಇರುವುದರಿಂದ ತಿಳಿದುಕೊಂಡು ನಂತರ ಮಾತನಾಡುತ್ತೇನೆ ಎಂದು ಹೇಳುವ ಮೂಲಕ ತಮ್ಮ ನಿರಾಸಕ್ತಿ ತೋರಿಸಿದ್ದಾರೆ.
ಹೋರಾಟದ ಹಾದಿ : ಸಿದ್ದರಾಮಯ್ಯ ಮಹತ್ವಾಕಾಂಕ್ಷೆಯಿಂದ ಜಾರಿಗೆ ತರಲು ಉದ್ದೇಶಿಸಿದ್ದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವರದಿ (ಜಾತಿ ಗಣತಿ) ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರವಾಗಿದೆ ಎಂಬ ಉದ್ದೇಶದಿಂದ ಬಿಜೆಪಿ ಸರ್ಕಾರ ವರದಿ ಬಿಡುಗಡೆ ಮಾಡುವುದಿಲ್ಲ ಎಂದಿದೆ.
ಆದರೆ, ಚುನಾವಣೆಗೆ ಇನ್ನೂ ಎರಡು ವರ್ಷ ಕಾಲಾವಕಾಶ ಇದ್ದು, ವರದಿಯನ್ನು ಒತ್ತಡ ಹೇರಿ ಬಿಡುಗಡೆ ಮಾಡಿಸಿದರೆ ಜನರ ಮುಂದೆ ಮತ ಯಾಚನೆಗೆ ಹೋಗುವಾಗ ಒಂದು ಲೆಕ್ಕಾಚಾರದ ಮೇಲೆ ತೆರಳಬಹುದು ಎನ್ನುವುದು ಕಾಂಗ್ರೆಸ್ ನಾಯಕರ ಆಶಯವಾಗಿದೆ. ಇದರಿಂದಲೇ ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಈ ವರದಿ ಬಿಡುಗಡೆ ವಿಚಾರ ಪ್ರಸ್ತಾಪಿಸಲು ನಿರ್ಧರಿಸಿದ್ದಾರೆ. ಇದಕ್ಕೂ ಮುನ್ನ ರಾಜ್ಯ ಮಟ್ಟದಲ್ಲಿ ಒಂದಿಷ್ಟು ಹೋರಾಟಕ್ಕೂ ಅಣಿಯಾಗಿದೆ ಕಾಂಗ್ರೆಸ್.
1931ರಲ್ಲಿ ಒಮ್ಮೆ ಜಾತಿ ಜನಗಣತಿ ನಡೆಸಲಾಗಿತ್ತು. ಅದಾದ ಬಳಿಕ ನಡೆದಿರಲಿಲ್ಲ. ಸಿದ್ದರಾಮಯ್ಯ ಸಂಪುಟ 2013-14ನೇ ಸಾಲಿನ ಬಜೆಟ್ನಲ್ಲಿ ಇದಕ್ಕಾಗಿ ಹಣ ಇರಿಸಿ ವರದಿ ನೀಡಲು ಸಮಿತಿ ರಚಿಸಿತ್ತು. 2015ರ ಏ.11 ರಿಂದ 20 ದಿನಗಳ ಕಾಲ ಜಾತಿ ಜನಗಣತಿ ಸಮೀಕ್ಷೆ ನಡೆದಿತ್ತು. 1.31 ಕೋಟಿ ಕುಟುಂಬಗಳನ್ನು ಈ ಸಂದರ್ಭ ಸಮಿತಿ ಸದಸ್ಯರು ಸಂಪರ್ಕಿಸಿದ್ದರು. ವರದಿ ಸಿದ್ಧವಾದರೂ ಚುನಾವಣೆ ಸಮೀಪಿಸಲಿ ಎಂದು ಸರ್ಕಾರ ಕಾಯುತ್ತಾ ವರ್ಷಗಳನ್ನು ಕಳೆಯಿತು. ಈ ಮಧ್ಯೆ ವರದಿಯ ಪ್ರಮುಖಾಂಶಗಳು ಸೋರಿಕೆಯಾದವು. ಅಲ್ಲಿಗೆ ಕಾಂಗ್ರೆಸ್ ಹೈಕಮಾಂಡ್ ವರದಿ ಬಿಡುಗಡೆಗೆ ತಡೆಯೊಡ್ಡಿತು.
ವರದಿಯಲ್ಲೇನಿತ್ತು?: ವರದಿ ಪ್ರಕಾರ ರಾಜ್ಯದಲ್ಲಿ ದಲಿತರೇ ಹೆಚ್ಚಾಗಿದ್ದು, ಕುರುಬ ಜನಾಂಗವೇ ಅತಿ ಹಿಂದುಳಿದ ಸಮುದಾಯವಾಗಿತ್ತು. ಒಟ್ಟು ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 1.08 ಕೋಟಿ, ಪರಿಶಿಷ್ಟ ಪಂಗಡದ 40.45 ಲಕ್ಷ, ಮುಸ್ಲಿಮರು 70 ಲಕ್ಷ ಹಾಗೂ ಹಿಂದುಳಿದ ಸಮುದಾಯಕ್ಕೆ ಸೇರಿದ ಕುರುಬರು 45 ಲಕ್ಷ ಸಂಖ್ಯೆಯಲ್ಲಿದ್ದಾರೆ ಎಂದು ವರದಿಯಲ್ಲಿದೆ.
ಒಟ್ಟು 816 ಇತರ ಹಿಂದುಳಿದ ಜಾತಿಗಳೆಂದು ಗುರುತಿಸಲಾಗಿದೆ. ಒಟ್ಟು 1,351 ಜಾತಿಗಳನ್ನು ಸಮೀಕ್ಷೆಯಡಿ ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು, ಹೊಸದಾಗಿ 192 ಜಾತಿಗಳನ್ನ ದಾಖಲಿಸಲಾಗಿದೆ. 10ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 80 ಜಾತಿಗಳ ಹೆಸರನ್ನು ವರದಿಯಲ್ಲಿ ದಾಖಲಿಸಲಾಗಿದೆ. ಸುಮಾರು 30 ಜಾತಿಗಳು ಅತ್ಯಂತ ಹಿಂದುಳಿದ ಜಾತಿ ವರ್ಗದಡಿ ಸೇರಲಿವೆ. ಒಟ್ಟು 5.98 ಕೋಟಿ ಜನ ಸಮೀಕ್ಷೆಗೆ ಒಳಪಟ್ಟಿದ್ದು, ಅವರಲ್ಲಿ 32 ಲಕ್ಷ ಜನ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ ಎಂದು ವರದಿ ಸಿದ್ಧವಾಗಿದೆ.
ಜಾತಿವಾರು ಜನಸಂಖ್ಯೆ : ಪರಿಶಿಷ್ಟ ಜಾತಿ(ಎಸ್ಸಿ) ಸಂಖ್ಯೆ 1.08 ಕೋಟಿ, ಪರಿಶಿಷ್ಟ ಪಂಗಡ(ಎಸ್ಟಿ) ಪ್ರಮಾಣ 40.45 ಲಕ್ಷ, ಮುಸ್ಲಿಮರು 70 ಲಕ್ಷ, ಲಿಂಗಾಯತ: 65 ಲಕ್ಷ, ಒಕ್ಕಲಿಗ: 60 ಲಕ್ಷ, ಕುರುಬರು 45 ಲಕ್ಷ, ಈಡಿಗ: 15 ಲಕ್ಷ, ವಿಶ್ವಕರ್ಮ: 15, ಬೆಸ್ತ: 15 ಲಕ್ಷ, ಬ್ರಾಹ್ಮಣ: 14 ಲಕ್ಷ, ಗೊಲ್ಲ(ಯಾದವ) 10 ಲಕ್ಷ, ಮಡಿವಾಳ ಸಮಾಜ: 6 ಲಕ್ಷ, ಅರೆ ಅಲೆಮಾರಿ 6 ಲಕ್ಷ, ಕುಂಬಾರ 5 ಲಕ್ಷ ಹಾಗೂ ಸವಿತಾ ಸಮಾಜ 5 ಲಕ್ಷ ಎಂದು ವಿವರಿಸಲಾಗಿದೆ.
ಈಗ ಸರ್ಕಾರದ ಮೇಲೆ ಒತ್ತಡ ಹೇರಿ ವರದಿ ಬಿಡುಗಡೆ ಮಾಡಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಕಾಂಗ್ರೆಸ್ ಉದ್ದೇಶವಾಗಿದ್ದರೆ, ವರದಿಯ ವಿಚಾರವಾಗಿ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳುವ ಮೂಲಕ ಸರ್ಕಾರ ನುಣುಚಿಕೊಳ್ಳುತ್ತಿದೆ. ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಇದೇ ವಿಚಾರ ದೊಡ್ಡ ಚರ್ಚೆಗೆ ಬರುವುದರಲ್ಲಿ ಅನುಮಾನವಿಲ್ಲ.