ಬೆಂಗಳೂರು: ಮಾನನಷ್ಟ ವರದಿ ಪ್ರಕಟ ಮಾಡದಂತೆ ಕೋರ್ಟ್ ಮೊರೆ ಹೋಗಿರುವ ಆರು ಸಚಿವರ ವಿರುದ್ಧ ಕಾಂಗ್ರೆಸ್ ತನ್ನ ಹೋರಾಟ ಮುಂದುವರಿಸಲು ತೀರ್ಮಾನಿಸಿದ್ದು, ಉಭಯ ಸದನಗಳಲ್ಲಿ ಸಚಿವರಿಂದ ಯಾವುದೇ ಉತ್ತರ ಪಡೆಯದಿರಲು ತೀರ್ಮಾನಿಸಿದೆ.
ಉಭಯ ಸದನಗಳಲ್ಲಿ ಕಾಂಗ್ರೆಸ್ ಗಟ್ಟಿ ನಿರ್ಧಾರ ಕೈಗೊಂಡಿದ್ದು, ಕಲಾಪದಲ್ಲಿ ನಡೆಯುವ ಪ್ರಶ್ನೋತ್ತರ ಅವಧಿ ಹಾಗೂ ಇತರ ಚರ್ಚೆ ಸಂದರ್ಭಗಳಲ್ಲಿ 6 ಸಚಿವರಿಂದ ಯಾವುದೇ ಉತ್ತರ ಪಡೆಯದಿರಲು ಹಾಗೂ ಈಗಾಗಲೇ ಕೇಳಿರುವ ಪ್ರಶ್ನೆಗೆ ಉತ್ತರ ಕೊಡುವ ಮುನ್ನವೇ ಅದನ್ನು ಬಹಿಷ್ಕರಿಸಲು ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆ, ವಿಧಾನ ಪರಿಷತ್ ಸದಸ್ಯರಿಗೆ ಸೂಚನೆ ನೀಡಿದ್ದಾರೆ.
ನಿಮ್ಮ ಉತ್ತರ ನಮಗೆ ಬೇಕಿಲ್ಲವೆಂದು ಹೇಳಿ ಹೊಸದಾಗಿ ಸದನದಲ್ಲಿ ಅವರಿಗೆ ಪ್ರಶ್ನೆ ಮಾಡಬೇಡಿ, ಅವರಿಂದ ಯಾವ ಉತ್ತರವನ್ನೂ ಪಡೆಯಬೇಡಿ, ನಿಮ್ಮ ಅನೈತಿಕ ಉತ್ತರ ನಮಗೆ ಬೇಡವೆಂದು ಹೇಳಿ ಬೇರೆ ಸಚಿವರಿಗೆ ಪ್ರಶ್ನೆಯನ್ನೂ ಹಾಕಿ ಉತ್ತರವನ್ನು ಪಡೆಯಿರಿ. ಆದರೆ, ಆರು ಸಚಿವರಿಗೆ ಪ್ರಶ್ನೆಯೂ ಬೇಡ, ಉತ್ತರವೂ ಬೇಡ. ನಾವು ಗಾಂಧಿಗಿರಿ ಮಾದರಿಯಲ್ಲೇ ಅವರಿಗೆ ಮುಜುಗರ ತರೋಣ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಓದಿ: ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗ ನೀಡಿದ ಅನುದಾನದ ವರದಿ
ಈಗಾಗಲೇ ಶಾಸಕರು ಈ ಕಾರ್ಯವನ್ನು ಕಾರ್ಯಾಚರಣೆಗೆ ತಂದಿದ್ದು, ನಿನ್ನೆ ವಿಧಾನಪರಿಷತ್ನಲ್ಲಿ ಸಹ ಕಾಂಗ್ರೆಸ್ ಸದಸ್ಯರಾದ ಪ್ರಸನ್ನಕುಮಾರ್ ಹಾಗೂ ಬಸವರಾಜ ಇಟಿಗಿ ನಗರಾಭಿವೃದ್ಧಿ ಸಚಿವರಾದ ಪ್ರಶ್ನೆಯನ್ನು ಬಹಿಷ್ಕರಿಸಿದ್ದರು. ಇಂದು ಹಾಗೂ ಈ ಬಜೆಟ್ ಅಧಿವೇಶನ ಮುಗಿಯುವವರೆಗೂ ಇದೇ ಸಂಪ್ರದಾಯವನ್ನು ಮುಂದುವರಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಇದೆ.
ತಮ್ಮ ಶಾಸಕರು, ಪರಿಷತ್ ಸದಸ್ಯರಿಗೆ ಸಿದ್ದರಾಮಯ್ಯ ಸೂಚನೆ ನೀಡಿದ್ದು, ಅವಕಾಶ ಸಿಕ್ಕಾಗೆಲ್ಲ ಸಚಿವರ ವಿರುದ್ಧ ವಾಗ್ದಾಳಿ ನಡೆಸಿ ಹಾಗೂ ಈ ವಿಚಾರವಾಗಿ ತಮಗೆ ಚರ್ಚೆಗೆ ಅವಕಾಶ ಕೊಡಿ ಎಂದು ವಿಧಾನಸಭಾಧ್ಯಕ್ಷರು ಹಾಗೂ ವಿಧಾನಪರಿಷತ್ ಸಭಾಪತಿಗಳಲ್ಲಿ ಮನವಿ ಮಾಡಿ ಅವಕಾಶ ಸಿಕ್ಕರೆ ಸಾಧ್ಯವಾದಷ್ಟು ಗಂಭೀರ ಚರ್ಚೆಯಲ್ಲಿ ಪಾಲ್ಗೊಳ್ಳಿ, ಆರು ಸಚಿವರ ಕಾರ್ಯವನ್ನು ಖಂಡಿಸಿ ಮತ್ತು ಅವರ ಬೆಂಬಲಕ್ಕೆ ನಿಂತಿರುವ ಸರ್ಕಾರದ ನಿಲುವನ್ನು ವಿರೋಧಿಸಿ ಎಂದು ಸೂಚಿಸಿದ್ದಾರೆ. ಈ ನಿರ್ಧಾರ ಕೈಗೊಳ್ಳುವ ಮೂಲಕ ಗಾಂಧಿಗಿರಿಯಿಂದಲೇ ಆರು ಸಚಿವರಿಗೆ ಕಾಂಗ್ರೆಸ್ ತಿರುಗೇಟು ನೀಡಲು ಕಾಂಗ್ರೆಸ್ ಸಿದ್ಧತೆ ಕೈಗೊಂಡಿದೆ.