ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸದ್ದಿಲ್ಲದೆ ವಾರ್ ರೂಂಗಳ ಮೂಲಕ ಚುನಾವಣಾ ತಂತ್ರಗಾರಿಕೆ ಹೆಣೆಯಲು ಶುರುಮಾಡಿವೆ. ತಮ್ಮ ತಮ್ಮದೇ ಆದ ರಾಜಕೀಯ ತಂತ್ರ ರೂಪಿಸುತ್ತಿವೆ. ಅಭ್ಯರ್ಥಿಗಳ ಸಾಮರ್ಥ್ಯದ ಪರಾಮರ್ಶೆ ಜೊತೆಗೆ ಹೊಸಬರಿಗೆ ಮಣೆ ಹಾಕುವ ಕುರಿತ ರಣತಂತ್ರ ಇಲ್ಲಿಯೇ ಸಿದ್ಧವಾಗಲಿದೆ.
ಹೈಕಮಾಂಡ್ ಗಳ ನಿರ್ದೇಶನದಂತೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ವಾರ್ ರೂಂ ತೆರೆದಿದ್ದು, 2023 ರ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಿವೆ. ಆಡಳಿತಾರೂಢ ಬಿಜೆಪಿ ಮಲ್ಲೇಶ್ವರದ ಕೆನರಾ ಯೂನಿಯನ್ ಎದುರು 8ನೇ ಮುಖ್ಯ ರಸ್ತೆಯಲ್ಲಿ ಪಕ್ಷದ ರಾಜ್ಯ ಮಟ್ಟದ ವಾರ್ ರೂಂ ತೆರೆದಿದೆ. ಪ್ರತಿಪಕ್ಷ ಕಾಂಗ್ರೆಸ್ ವಾರ್ ರೂಂಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಉದ್ಘಾಟನೆಯನ್ನು ಬಾಕಿ ಉಳಿಸಿಕೊಂಡಿದೆ. ಯಾವ ಜಾಗದಲ್ಲಿ ವಾರ್ ರೂಂ ಸಿದ್ಧವಾಗಿದೆ ಎನ್ನುವ ಮಾಹಿತಿಯನ್ನು ಸ್ಯದ್ಯದಲ್ಲೇ ಪ್ರಕಟಿಸಲಾಗುತ್ತದೆ ಎಂದು ಕೆಪಿಸಿಸಿ ವಕ್ತಾರರು ಮಾಹಿತಿ ನೀಡಿದ್ದಾರೆ.
ವಾರ್ ರೂಂ ಮೂಲಕ ಸಂಘಟನೆ: ಸದ್ಯಕ್ಕೆ ಬಿಜೆಪಿ ಆರಂಭಿಸಿರುವ ರಾಜ್ಯ ಮಟ್ಟದ ವಾರ್ ರೂಂ ಮೂಲಕ ಮೊದಲ ಹಂತವಾಗಿ ಜಿಲ್ಲೆ, ಜಿಲ್ಲೆಯಿಂದ ಮಂಡಲ, ಮಂಡಲದಿಂದ ಮತಗಟ್ಟೆವರೆಗೆ, ಮತಗಟ್ಟೆಯಿಂದ ಕಾರ್ಯಕರ್ತ, ಅಲ್ಲಿಂದ ಮತದಾರರನ್ನು ಸಂಪರ್ಕಿಸುವ ಕಾರ್ಯಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಸಂಘಟನಾತ್ಮಕವಾಗಿ ಚುನಾವಣೆಯನ್ನು ಎದುರಿಸುವುದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ವಾರ್ ರೂಂ ಮೂಲಕ ಸಂಘಟಿಸಲಾಗುತ್ತಿದೆ. ಪೇಜ್ ಕಮಿಟಿಯಿಂದ ಆರಂಭಿಸಿ ಬೂತ್ ಸಶಕ್ತೀಕರಣ ಕಾರ್ಯವನ್ನು ಪೂರ್ಣಗೊಳಿಸಿರುವ ಬಿಜೆಪಿ ಮತಗಟ್ಟೆಯಲ್ಲೂ ವಾರ್ ರೂಂಗಳನ್ನು ತೆರೆದು ರಣತಂತ್ರ ಆರಂಭಿಸಿದೆ.
ವಾರ್ ರೂಂಗೆ ಎಲ್ಲರ ಮುಕ್ತ ಪ್ರವೇಶಕ್ಕೆ ನಿರ್ಬಂಧ: ಬಿಜೆಪಿ ಆರಂಭಿಸಿರುವ ಈ ವಾರ್ ರೂಂನಲ್ಲಿ ಮೀಡಿಯಾ ಸೆಂಟರ್, ಕಾಲ್ ಸೆಂಟರ್, ಸಾಮಾಜಿಕ ಜಾಲತಾಣಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಚುನಾವಣೆ ವೇಳೆ ಪಕ್ಷದ ಪರವಾದ ಸುದ್ದಿಗೋಷ್ಟಿಗಳನ್ನು ನಡೆಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿಯೇ ಮಾಧ್ಯಮ ಕೇಂದ್ರ ತೆರೆದಿದೆ.
ಈ ವಾರ್ ರೂಂಗೆ ಎಲ್ಲರ ಮುಕ್ತ ಪ್ರವೇಶಕ್ಕೆ ನಿರ್ಬಂಧವಿರಲಿದೆ. ಜವಾಬ್ದಾರಿ ನಿರ್ವಹಣೆ ಮಾಡುವವರಿಗೆ ಮಾತ್ರ ಪ್ರವೇಶವಿರಲಿದೆ.
ಹಾಲಿ ಶಾಸಕರ ಕುರಿತು ಸಮೀಕ್ಷೆಗಳ ವರದಿಯನ್ನು ಅವಲೋಕನ ನಡೆಸಲಾಗುತ್ತದೆ. ಸೋತಿದ್ದ ಕ್ಷೇತ್ರಗಳಲ್ಲಿ ಪರಿಸ್ಥಿತಿ ಯಾವ ರೀತಿ ಇದೆ ಎನ್ನುವ ಕುರಿತು ಪರಾಮರ್ಶೆ ನಡೆಸಲಾಗುತ್ತದೆ. ಯಾವ ಯಾವ ಕ್ಷೇತ್ರದಲ್ಲಿ ಯಾವ ಯಾವ ರೀತಿಯ ಕಾರ್ಯತಂತ್ರ ಹೆಣೆಯಬೇಕು ಎನ್ನುವ ಕುರಿತು ತಂತ್ರಗಾರಿಕೆ ರೂಪಿಸಲಾಗುತ್ತದೆ. ಚುನಾವಣೆ ಕುರಿತ ಎಲ್ಲ ವಿದ್ಯಮಾನಗಳು ಇಲ್ಲಿಯೇ ಸಿದ್ಧವಾಗಲಿವೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಯಾಕಿಷ್ಟು ಅಸ್ಪಷ್ಟತೆ: ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನೆ
ಇದರ ಜೊತೆಗೆ ಹೈಕಮಾಂಡ್ ಕೂಡ ಪ್ರತ್ಯೇಕ ವಾರ್ ರೂಂ ಆರಂಭಿಸುವ ಚಿಂತನೆ ನಡೆಸಿದೆ. ಗುಜರಾತ್ ಚುನಾವಣೆ ಮುಗಿಯುತ್ತಿದ್ದಂತೆ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಖಾಡಕ್ಕಿಳಿಯಲಿದ್ದು, ನಗರದ ಹೊರವಲಯದಲ್ಲಿನ ರೆಸಾರ್ಟ್ ಒಂದರಲ್ಲಿ ವಾರ್ ರೂಂ ಆರಂಭಿಸಲಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ವಾರ್ ರೂಂ ಸನ್ನದ್ಧಗೊಳಿಸಿದ ಕೈಪಡೆ: 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಪ್ರತಿಪಕ್ಷ ಕಾಂಗ್ರೆಸ್ ಕೂಡ ಸಿದ್ಧತೆ ನಡೆಸಿದೆ. ಪಕ್ಷದ ಪ್ರಚಾರಕ್ಕೆ ಸಮನ್ವಯತೆ ಸಾಧಿಸಲು ರಾಜ್ಯ ಮಟ್ಟದ ವಾರ್ ರೂಂ ಸ್ಥಾಪಿಸಿದೆ. 2023 ರ ಮೇ ತಿಂಗಳಿನವರೆಗೂ ಪಕ್ಷದ ಚುನಾವಣಾ ವಿಷಯಕ್ಕೆ ಸಂಬಂಧಿಸಿದ ಆಂತರಿಕ ಚಟುವಟಿಕೆಗಳು ಈ ವಾರ್ ರೂಂ ನಲ್ಲಿಯೇ ನಡೆಯಲಿವೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ರಣದೀಪ್ ಸಿಂಗ್ ಸುರ್ಜೆವಾಲಾ ವಾರ್ ರೂಂ ಉಸ್ತುವಾರಿ ವಹಿಸಿಕೊಂಡು ಹೈಕಮಾಂಡ್ ಮತ್ತು ಕೆಪಿಸಿಸಿ ನಡುವೆ ಸೇತುವೆಯಾಗಿ ಕೆಲಸ ಮಾಡಲಿದ್ದಾರೆ.
ಈಗಾಗಲೇ ವಾರ್ ರೂಂ ಸಿದ್ಧಗೊಂಡಿದ್ದು, ಸದ್ಯದಲ್ಲೇ ಅದನ್ನು ಉದ್ಘಾಟನೆ ಮಾಡಲಾಗುತ್ತದೆ. ಎಐಸಿಸಿ ಅಧಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ವಾರ್ ರೂಂ ಉದ್ಘಾಟನೆ ಮಾಡಲಿದ್ದಾರೆ. ಆ ಮೂಲಕ ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎನ್ನಲಾಗ್ತಿದೆ. ವಾರ್ ರೂಂ ಪರಿಕಲ್ಪನೆ ಮಾದರಿಯಲ್ಲೇ ಜೆಡಿಎಸ್ ಕೂಡ ವ್ಯವಸ್ಥೆಯೊಂದನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ಸದ್ಯ ಪಂಚರತ್ನ ಯಾತ್ರೆಯಲ್ಲಿರುವ ದಳಪತಿಗಳು ಯಾತ್ರೆ ಮುಗಿದ ನಂತರ ಈ ಕುರಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.