ಬೆಂಗಳೂರು: ರಾಜ್ಯದ ವಿವಿಧ ಗಡಿ ಜಿಲ್ಲೆಗಳಲ್ಲಿನ ನಿಯಮ ಮೀರಿ ಸರಹದ್ದು ಉಲ್ಲಂಘಿಸಿ ಬರುವವರನ್ನು ಹಾಗೂ ಅವರ ಚಲನವಲನಗಳ ಮೇಲೆ ನಿಗಾವಹಿಸಲು ರಾಜ್ಯ ಕಾಂಗ್ರೆಸ್ ಪಕ್ಷ ತಮ್ಮ ನಾಯಕರಿಗೆ ವಿಶೇಷ ಜವಾಬ್ದಾರಿಯನ್ನು ನೀಡಿದೆ.
ಕೋವಿಡ್-19 ವ್ಯಾಪಕವಾಗಿ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಅಲ್ಲದೇ ಗಡಿ ಭಾಗದಲ್ಲಿ ನುಸುಳುಕೋರರಿಂದಾಗಿ ರಾಜ್ಯದಲ್ಲಿ ಕೊರೊನಾ ಸಮಸ್ಯೆ ಹೆಚ್ಚಾಗಿದೆ. ಇದಕ್ಕಾಗಿಯೇ ಇದರ ಮೇಲೆ ನಿಗಾ ಇಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಆದೇಶ ಹೊರಡಿಸಿದ್ದು, ಗಡಿ ಭಾಗದಲ್ಲಿ ನಿಯಮ ಉಲ್ಲಂಘಿಸುವವರು ಹಾಗೂ ಅಂತಹ ಚಟುವಟಿಕೆ ನಡೆಸುವುದರ ಮೇಲೆ ಗಮನ ಹರಿಸುವಂತೆ ನಾಯಕರಿಗೆ ಸೂಚಿಸಿದ್ದಾರೆ. ಇದಕ್ಕೆ ಅಗತ್ಯವಿರುವ ಜವಾಬ್ದಾರಿ ಹಾಗೂ ಅಧಿಕೃತದ ಪರವಾನಗಿಯನ್ನೂ ನೀಡಿದ್ದಾರೆ.
ಜವಾಬ್ದಾರಿ ಹಂಚಿಕೆ
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಂಚಿಕೆ ಮಾಡಿರುವ ಪ್ರಕಾರ ಬೆಳಗಾವಿ ಹಾಗೂ ಚಿಕ್ಕೋಡಿ ಗಡಿ ಜಿಲ್ಲೆಯ ಜವಾಬ್ದಾರಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ನೀಡಿದ್ದು, ಇವರಿಗೆ ಸಹಕರಿಸುವ ಸದಸ್ಯರನ್ನಾಗಿ ಮಾಜಿ ಸಚಿವ ವೀರ್ಕುಮಾರ್ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್ ರಾವ್ ಚಿಂಗಲೆ, ಪಿಕೆಪಿಎಸ್ ಅಧ್ಯಕ್ಷ ಅನಿಲ್ ಚೌಗಲೆ ಅವರನ್ನು ನೇಮಕಗೊಳಿಸಿದ್ದಾರೆ.
ಬೀದರ್ ಜಿಲ್ಲೆಯ ಜವಾಬ್ದಾರಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಗೆ ನೀಡಲಾಗಿದೆ. ವೆಂಕಟ್ ಶಿಂಧೆ ಅವರನ್ನು ಸದಸ್ಯರನ್ನಾಗಿ ನಿಯೋಜಿಸಲಾಗಿದೆ. ವಿಜಯಪುರ ಹೊಣೆಯನ್ನು ಮಾಜಿ ಸಚಿವ ಎಂ.ಬಿ. ಪಾಟೀಲ್ಗೆ ನೀಡಲಾಗಿದೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅರ್ಜುನ್ ರಾಥೋಡ್ ಸದಸ್ಯರಾಗಿದ್ದಾರೆ. ಕಲಬುರುಗಿ ಜವಾಬ್ದಾರಿ ಮಾಜಿ ಸಚಿವ ಪ್ರಿಯಂಕ್ ಖರ್ಗೆ ಹಾಗೂ ಶಾಸಕ ಅಜಯ್ ಸಿಂಗ್ ಹೆಗಲಿಗೆ ವಹಿಸಲಾಗಿದೆ. ಸದಸ್ಯರಾಗಿ ಜಿಲ್ಲಾಧ್ಯಕ್ಷ ಎರೆನ್ನಾ ಜಲ್ಕಿ ವೈ.ಸಿ. ನಿಯೋಜಿತರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿಯನ್ನು ಮಾಜಿ ಸಚಿವ ಆರ್.ವಿ, ದೇಶಪಾಂಡೆಗೆ ವಹಿಸಿದ್ದು, ಪ್ರಶಾಂತ್ ಅವರನ್ನು ಇವರ ಜತೆ ಸದಸ್ಯರನ್ನಾಗಿ ನಿಯೋಜಿಸಿ ಆದೇಶ ಹೊರಡಿಸಲಾಗಿದೆ. ತಕ್ಷಣಕ್ಕೆ ಜಾರಿಗೆ ಬರುವಂತೆ ಇವರು ತಮ್ಮ ಉಸ್ತುವಾರಿ ಗಡಿ ಜಿಲ್ಲೆಯಲ್ಲಿ ಕಾರ್ಯನಿರತರಾಗಲಿದ್ದಾರೆ.