ಬೆಂಗಳೂರು: ವಿಧಾನಸಭೆ ಚುನಾವಣೆ ದಿನಾಂಕಕ್ಕೂ ಮೊದಲೇ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಪ್ರಕಟಿಸುವುದಾಗಿ ತಿಳಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಭರವಸೆ ಇನ್ನೂ ಘೋಷಣೆಯಾಗಿಯೇ ಉಳಿದಿದೆ.
ಬರುವ ಚುನಾವಣೆಯಲ್ಲಿ ಗೆಲವು ಸಾಧಿಸಿ, ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುವ ಆತ್ಮವಿಶ್ವಾಸ ಹೊಂದಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನವೆಂಬರ್ ಅಂತ್ಯದೊಳಗೆ ಕಾಂಗ್ರೆಸ್ ಪಕ್ಷದ ಸುಮಾರು 100 ಜನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದರು. ಆದರೆ, ಇದೀಗ ನವೆಂಬರ್ ಅಂತ್ಯಗೊಂಡು ಡಿಸೆಂಬರ್ ಮೊದಲ ವಾರ ಮುಗಿಯುತ್ತಾ ಬಂದರೂ ಕಾಂಗ್ರೆಸ್ ಪಟ್ಟಿ ಬಗ್ಗೆ ಯಾವುದೇ ಸುಳಿವಿಲ್ಲ.
ಕಳೆದ ತಿಂಗಳು ಚುನಾವಣೆಯಲ್ಲಿ ಟಿಕೆಟ್ ನೀಡಲು ಕಾಂಗ್ರೆಸ್ ಅರ್ಜಿಗಳನ್ನು ಆಹ್ವಾನಿಸಿತ್ತು. ಸಾವಿರಕ್ಕೂ ಹೆಚ್ಚೂ ಟಿಕೆಟ್ ಅಪೇಕ್ಷಿತರಿಂದ ಅರ್ಜಿಗಳನ್ನು ಸಂಗ್ರಹಿಸಿದೆ. ಈ ಪ್ರಕ್ರಿಯೆಯಿಂದಾಗಿ ಕಾಂಗ್ರೆಸ್ ಪಕ್ಷವು ಭರವಸೆ ನೀಡಿದಂತೆ ನವೆಂಬರ್ ತಿಂಗಳ ಅಂತ್ಯದೊಳಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟ ಮಾಡಬಹುದು ಎನ್ನುವ ನಿರೀಕ್ಷೆ ಟಿಕೆಟ್ ಆಕಾಂಕ್ಷಿಗಳಲ್ಲಿ ಮೂಡಿತ್ತು. ಆದರೆ, ಡಿಸೆಂಬರ್ ಮೊದಲ ವಾರ ಪೂರ್ಣಗೊಳ್ಳುತ್ತಾ ಬಂದರೂ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡದಿರುವುದು, ಚುನಾವಣೆಗೆ ಸ್ಪರ್ಧೆ ಮಾಡಲು ಸಿದ್ಧತೆ ನಡೆಸುತ್ತಿರುವ ಆಕಾಂಕ್ಷಿಗಳಲ್ಲಿ ನಿರಾಸೆ ಮೂಡಿಸಿದೆ.
ಭರವಸೆಯಾಗಿಯೇ ಉಳಿದ ಜೆಡಿಎಸ್ ಮಾತು: ಜೆಡಿಎಸ್ನ ವರಿಷ್ಠರಾದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ಪಕ್ಷದ ಸುಮಾರು 120 ಅಭ್ಯರ್ಥಿಗಳ ಪಟ್ಟಿಯನ್ನು ವಿಧಾನಸಭೆ ಚುನಾವಣೆಗೆ ಒಂದು ವರ್ಷ ಮುನ್ನವೇ ಘೋಷಣೆ ಮಾಡುವುದಾಗಿ ಹೇಳಿದ್ದರು. ಕಳೆದ ಜನವರಿ ತಿಂಗಳ ಸಂಕ್ರಾಂತಿ ಹಬ್ಬದ ವೇಳೆಗೆ ಮೊದಲ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಪಕ್ಷದ ಕಾರ್ಯಕರ್ತರಿಗೆ, ಮುಖಂಡರುಗಳಿಗೆ ಸಂದೇಶ ನೀಡಿದ್ದರು. ಆದರೆ, ಈ ಭರವಸೆಗೆ ಒಂದು ವರ್ಷ ತುಂಬುತ್ತ ಬಂದರೂ ಇದುವರೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿಲ್ಲ. ಒಂದಿಲ್ಲೊಂದು ನೆಪವೊಡ್ಡಿ ಅಭ್ಯರ್ಥಿಗಳ ಪಟ್ಟಿ ಬಹಿರಂಗಪಡಿಸುವುದನ್ನು ಮುಂದೂಡುತ್ತಲೇ ಬರಲಾಗಿದೆ.
ಅಬ್ಬರದ ಪ್ರಚಾರದಲ್ಲಿ ಪಕ್ಷಗಳು: ಇತ್ತ ಆರು ತಿಂಗಳ ಮೊದಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸಿವೆ. ಅಭ್ಯರ್ಥಿಗಳ ಘೋಷಣೆ ಮಾಡದೇ ಕೇವಲ ಭರವಸೆಯಲ್ಲಿಯೇ ಚುನಾವಣೆ ಪ್ರಚಾರ ನಡೆಸುತ್ತಿರುವ ಬಗ್ಗೆ ಟಿಕೆಟ್ ಆಕಾಂಕ್ಷಿಗಳಲ್ಲಿ ಬೇಸರವಿದೆ. ಚುನಾವಣೆಗೆ ಕನಿಷ್ಠ ಪಕ್ಷ 6 ತಿಂಗಳ ಮೊದಲೇ ಅಭ್ಯರ್ಥಿಗಳನ್ನ ಘೋಷಿಸಿದರೆ, ಮತದಾರ ಸೆಳೆದು, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬಹುದು ಎನ್ನುವುದು ಹಲವಯ ಟಿಕೆಟ್ ಆಕಾಂಕ್ಷಿಗಳ ಅಭಿಪ್ರಾಯ.
ಸಂದೇಶ ರವಾನೆ: ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲಿ ಬಹುತೇಕ ಸಿದ್ಧಗೊಂಡಿದೆ. ಕಾಂಗ್ರೆಸ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾಗಿಯಾಗುವ ಸಭೆ, ಸಮಾರಂಭ ಮತ್ತು ರಾಜ್ಯ ಪ್ರವಾಸದ ಸಂದರ್ಭದಲ್ಲಿ ಹಲವು ಅಭ್ಯರ್ಥಿಗಳಿಗೆ ಟಿಕೆಟ್ ಪಕ್ಕಾ ಎಂದು ಭರವಸೆ ನೀಡುತ್ತಿದ್ದಾರೆ ಎನ್ನಲಾಗಿದೆ.
ಅನೌಪಚಾರಿಕವಾಗಿ ಹೆಚ್ಚು ಸ್ಪರ್ಧಾಳುಗಳಿಲ್ಲದ ಕ್ಷೇತ್ರಗಳಲ್ಲಿ ನಿರ್ಧಿಷ್ಟ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್ ನೀಡುವುದನ್ನು ಖಚಿತಪಡಿಸಲಾಗುತ್ತಿದ್ದು, ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲೂ ಸಂದೇಶ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಜಾತ್ಯತೀತ ಜನತಾದಳದಲ್ಲಿ ಸಹ ಮಾಜಿ ಸಿಎಂ ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆ ನಡೆಸುತ್ತಿರುವಾಗ ಅಲ್ಲಲ್ಲಿ ಅಭ್ಯರ್ಥಿಗಳ ಹೆಸರನ್ನು ಸ್ಥಳೀಯವಾಗಿ ಪಕ್ಷದ ವೇದಿಕೆಯಲ್ಲಿ ಸೂಚ್ಯವಾಗಿ ಮತ್ತು ಕೆಲವೆಡೆ ಬಹಿರಂಗವಾಗಿ ಹೇಳುತ್ತಿದ್ದಾರೆ ಎನ್ನಲಾಗಿದೆ. ಕೆಲವೆಡೆ ಮಾಜಿ ಪ್ರಧಾನಿ ದೇವೇಗೌಡರು ಟಿಕೆಟ್ ನೀಡಿಕೆ ಬಗ್ಗೆ ಭರವಸೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಜಿ ಸಚಿವ ಹೆಚ್ ಡಿ ರೇವಣ್ಣನವರು ಹಾಸ ಜಿಲ್ಲೆಯಲ್ಲಿ ಟಿಕೆಟ್ ನೀಡಿಕೆ ಆಶ್ವಾಸನೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಅಭ್ಯರ್ಥಿಗಳ ಪಟ್ಟಿ ಪ್ರಕಟಕ್ಕೆ ಹಿಂದೇಟು ಏಕೆ..? ವಿಧಾನಸಭೆ ಚುನಾವಣೆಗೆ ನೀವೇ ಅಭ್ಯರ್ಥಿಗಳು, ನಿಮಗೇ ಪಕ್ಷದ ಟಿಕೆಟ್ ಖಚಿತ ಎಂದು ತಿಳಿಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೊದಲ ಪಟ್ಟಿ ಪ್ರಕಟಿಸಲು ಮಾತ್ರ ಹಿಂದೇಟು ಹಾಕತೊಡಗಿವೆ. ಚುನಾವಣೆ ವೇಳಾಪಟ್ಟಿ ಘೋಷಣೆಗೂ ಮುನ್ನವೇ ಹೆಚ್ಚು ದಿನಗಳ ಅಂತರದಲ್ಲಿ ಅಭ್ಯರ್ಥಿ ಪಟ್ಟಿ ಪ್ರಕಟಿಸಿದರೆ ಟಿಕೆಟ್ ಸಿಗದೇ ಇರುವ ಆಕಾಂಕ್ಷಿಗಳು ಬೇರೆ ಪಕ್ಷಕ್ಕೆ ಸೇರಬಹುದು. ಪಕ್ಷದ ವಿರುದ್ದ ಬಂಡಾಯದ ಚಟುವಟಿಕೆಗಳಲ್ಲಿ ತೊಡಗಬಹುದು ಎನ್ನುವ ಆತಂಕ ಎರಡೂ ಪಕ್ಷಗಳ ವರಿಷ್ಠರಿಗೆ ಕಾಡತೊಡಗಿದೆ.
ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಬಂಡಾಯಕ್ಕೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಟಿಕೆಟ್ ಸಿಗದ ಅಭ್ಯರ್ಥಿಗಳು ಪಕ್ಷ ಬಿಟ್ಟು ಹೋಗದಂತೆ ಮುನ್ನೆಚ್ಚರಿಕೆ ವಹಿಸಲು ಅಭ್ಯರ್ಥಿಗಳ ಪಟ್ಟಿಯನ್ನು ಬಹಿರಂಗವಾಗಿ ಪ್ರಕಟಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಉಳ್ಳಾಲ: ಪಕ್ಷ ವಿರೋಧಿ ಚಟುವಟಿಕೆ, ನಗರಸಭೆ ಕಾಂಗ್ರೆಸ್ ಕೌನ್ಸಿಲರ್ ಅಮಾನತು