ಬೆಂಗಳೂರು: ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಇಂದು ನಗರದಲ್ಲಿ ಬಕೆಟ್ ಹಿಡಿದು ಪ್ರತಿಭಟನೆ ನಡೆಸಿದರು.
ಪ್ರತಾಪ್ ಸಿಂಹ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರು, ಮೋದಿಯನ್ನು ದೇವರು ಎಂದು ಹೇಳಿರುವ ಸಂಸದ ಪ್ರತಾಪ್ ಸಿಂಹ ಬಕೆಟ್ ರಾಜಕಾರಣಿ ಅಂತ ಆಕ್ರೋಶ ಹೊರ ಹಾಕಿದ್ರು.
ಪಕ್ಷದ ಮುಖಂಡ ಎಸ್. ಮನೋಹರ್ ಮಾತನಾಡಿ, ರಾಜ್ಯದಲ್ಲಿ ತೀವ್ರ ಮಳೆಯಿಂದ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದು ಸಂತ್ರಸ್ತರು ಸಂಕಷ್ಟದಲ್ಲಿದ್ದಾರೆ. ಇವರ ನೆರವಿಗೆ ಧಾವಿಸದ ಪ್ರಧಾನಿ ನರೇಂದ್ರ ಮೋದಿ ಬಿಹಾರ ರಾಜ್ಯಕ್ಕೆ ಟ್ವೀಟ್ ಮೂಲಕ ಧೈರ್ಯ ತುಂಬುತ್ತಾರೆ. ಕರ್ನಾಟಕದ ಜನತೆ ಬಿಜೆಪಿಯನ್ನು ನಂಬಿ 25 ಜನರನ್ನು ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸಿಕೊಟ್ಟಿದ್ದಾರೆ. ನರೇಂದ್ರ ಮೋದಿಗೆ ಅಥವಾ ರಾಜ್ಯ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ರಾಜ್ಯದಲ್ಲಿ ಭೀಕರ ಪ್ರವಾಹಕ್ಕೆ ರಾಜ್ಯದ ಜನತೆ ತುತ್ತಾಗಿದ್ದಾರೆ. ನಿರಾಶ್ರಿತರು ಮನೆ ಇಲ್ಲದೆ ಹಾಗೂ ಆಹಾರವಿಲ್ಲದೆ ನರಳುತ್ತಿದ್ದಾರೆ. ಕೇವಲ ಪ್ರವಾಹ ಪೀಡಿತ ಪ್ರದೇಶಕ್ಕೆ ವೈಮಾನಿಕ ಸಮೀಕ್ಷೆ ನಡೆಸಿ ತೆರಳಿದ ಹಣಕಾಸು ಸಚಿವೆ ಹಾಗೂ ಗೃಹ ಸಚಿವರು ಆಗಮಿಸಿ ತಿಂಗಳು ಕಳೆದರೂ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಿಕೊಟ್ಟಿಲ್ಲ. ಈಗ ಇಂತಹ ಸಂಕಷ್ಟದಲ್ಲಿ ರಾಜ್ಯದಿಂದ ಪ್ರತಿನಿಧಿಸುವ ಕೇಂದ್ರ ಸಚಿವರು ಪ್ರಧಾನಿ ಮೇಲೆ ಒತ್ತಡ ತರುವಲ್ಲಿ ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಸಮಿತಿ ಅಧ್ಯಕ್ಷ ರಾಮಕೃಷ್ಣ ಮಾತನಾಡಿ, 25 ರಿಂದ 30 ಲಕ್ಷ ಮಂದಿ ನೆರೆಯಿಂದ ಸಂತ್ರಸ್ತರಾಗಿದ್ದಾರೆ. ಎರಡು ತಿಂಗಳು ಕಳೆದರೂ ಕೇಂದ್ರ ಸರ್ಕಾರ ಇದುವರೆಗೂ ನೆರೆ ಪರಿಹಾರ ನೀಡಿಲ್ಲ. ಮನೆ ಕಳೆದುಕೊಂಡವರಿಗೆ 10,000 ನೀಡುವುದಾಗಿ ಸರ್ಕಾರ ಹೇಳಿಕೊಳ್ಳುತ್ತಿದೆ. ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರು ಏನು ಮಾಡುತ್ತಿದ್ದಾರೆ. ನನಗೆ ಯಾವುದೇ ರೀತಿಯ ಅನುಕೂಲವನ್ನು ಬಿಜೆಪಿ ಸಂಸದರು ಮಾಡಿ ಕೊಟ್ಟಿಲ್ಲ ಎಂದು ಅಸಮಾಧಾನ ತೋಡಿಕೊಂಡರು.
ಬೆಂಗಳೂರು ಉತ್ತರ ಪ್ರಚಾರ ಸಮಿತಿ ಅಧ್ಯಕ್ಷ ಜಯಸಿಂಹ ಮಾತನಾಡಿ, ಸಂಸದರಾದ ಪ್ರತಾಪ್ ಸಿಂಹ ಹಾಗೂ ತೇಜಸ್ವಿ ಸೂರ್ಯ ಹೇಳಿಕೆಗಳು ನಿರಾಶಾದಾಯಕ. ಇಂಥವರು ಸಂಸದರಾಗಿರುವುದು ನಾಚಿಕೆಗೇಡು ಎಂದರು.