ಬೆಂಗಳೂರು : ಆರ್.ಆರ್ ನಗರವನ್ನು ಬಳ್ಳಾರಿಯಾಗಲು ಬಿಡಲ್ಲ ಎಂದು ಮುನಿರತ್ನ ಹೇಳಿದ್ದಾರೆ. ಹೀಗಾಗಿ, ಮುನಿರತ್ನ ಬಳ್ಳಾರಿ ಜನತೆಯ ಕ್ಷಮೆ ಕೇಳಬೇಕು ಎಂದು ಮಾಜಿ ಸಂಸದ ಧ್ರುವನಾರಾಯಣ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಹೆಚ್.ಎಂ ರೇವಣ್ಣ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುನಿರತ್ನ ಬಳ್ಳಾರಿ ಜನತೆಗೆ ಅವಮಾನ ಮಾಡಿದ್ದಾರೆ. ಹೀಗಾಗಿ, ಬಳ್ಳಾರಿ ಜನತೆಯ ಕ್ಷಮೆ ಕೇಳಬೇಕು ಎಂದರು. ನಿನ್ನೆ ಮುನಿರತ್ನಂ ನನ್ನ ಹೆಸರು ಬಳಸಿ ಹೇಳಿಕೆ ನೀಡಿದ್ದಾರೆ. ಮುನಿರತ್ನಗೆ ನನ್ನ ಹೆಸರು ಹೇಳೋ ನೈತಿಕತೆ ಇಲ್ಲ. ನಾನು ಹಲವಾರು ಚುನಾವಣೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ.
ಧ್ರುವನಾರಾಯಣ, ನಾರಾಯಣಸ್ವಾಮಿ ಆಮಿಷ ಒಡ್ಡುತ್ತಿದ್ದಾರೆ ಎಂದು ಮುನಿರತ್ನ ಹೇಳಿದ್ದಾರೆ. ಏಕಾಏಕಿ ನಮ್ಮ ಕಾರ್ಯಕರ್ತರ ಮೇಲೆ ಮುನಿರತ್ನ ಬೆಂಬಲಿಗ ವೇಲು ನಾಯ್ಕ್ ಮತ್ತು ಅವರ ಗುಂಪು ಹಲ್ಲೆ ನಡೆಸಿದ್ದಾರೆ. ಮುನಿರತ್ನಗೆ ನೈತಿಕತೆ ಇಲ್ಲ. ಕಳೆದ ಚುನಾವಣೆಯಲ್ಲಿ ಯಾವ ರೀತಿ ಅಕ್ರಮ ಮಾಡಿದ್ದರು ಎಂಬ ಬಗ್ಗೆ ಎಲ್ಲರಿಗೂ ಗೊತ್ತು. ಆಗಿನ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಕೇಸ್ ಹಾಕಿದ್ದಾರೆ ಎಂದು ಕಿಡಿಕಾರಿದರು.
ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಮುನಿರತ್ನಗೆ ಇಲ್ಲ. ಆರ್.ಆರ್ ನಗರದಲ್ಲಿ ನಾವು ಮನೆ ಮನೆಗೆ ಹೋಗಿ ಪ್ರಚಾರ ಮಾಡ್ತಾ ಇದ್ವಿ. ಆದರೆ, ಗುರುತಿನ ಚೀಟಿ ಸಂಗ್ರಹ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾವು ಯಾವುದೇ ಮತದಾರರ ಗುರುತಿನ ಚೀಟಿ ಸಂಗ್ರಹ ಮಾಡಿಲ್ಲ. ನೀವೆ ಈ ತರಹ ಮಾಡಿ ಚುನಾವಣೆ ಗೆದ್ದಿದ್ದು ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಜನರನ್ನು ಭಯಭೀತರನ್ನಾಗಿಸಿದೆ:
ಬಿಜೆಪಿ ನಾಯಕರು ಮತದಾರರನ್ನು ಭಯಭೀತರನ್ನಾಗಿಸಿದ್ದಾರೆ. ಹಕ್ಕುಪತ್ರ ವಾಪಸ್ ಪಡೆಯುತ್ತೇವೆ, ನೀರು ಕೊಡಲ್ಲ, ಮನೆ ಕೊಡಲ್ಲ ನಮ್ಮದೇ ಸರ್ಕಾರವಿದೆ ಎಂದು ಹೇಳಿ ಭಯ ಹುಟ್ಟಿಸುತ್ತಿದ್ದಾರೆ. ಬಿಜೆಪಿಯವರು ಮಾಡುವ ಕೆಲಸವನ್ನು ಕಾಂಗ್ರೆಸ್ ಮೇಲೆ ಹಾಕ್ತಿದ್ದಾರೆ. ಮುನಿರತ್ನಗೆ ಸೋಲುವ ಭೀತಿಯಿದೆ. ಬಿಜೆಪಿ ಪಕ್ಷ ಮತ್ತು ಆರೆಸ್ಸೆಸ್ನಿಂದ ಮುನಿರತ್ನಗೆ ಬೆಂಬಲ ಸಿಕ್ತಿಲ್ಲ. ಹೀಗಾಗಿ, ಮತದಾರರಿಗೆ ಬೆದರಿಕೆ ಹಾಕ್ತಿದ್ದಾರೆ. ಈ ಚುನಾವಣೆ ಮುನಿರತ್ನ ಮತ್ತು ಕುಸುಮಾ ಅವರದ್ದಲ್ಲ. ಇದು, ಆರ್.ಆರ್ ನಗರ ಜನತೆಯ ಸ್ವಾಭಿಮಾನದ ಚುನಾವಣೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೇರೆಯವರು ಕ್ಷೇತ್ರಕ್ಕೆ ಬಂದಿದ್ದಾರೆ ಅಂದರೆ ಹೇಗೆ..? ಬರುವುದರಲ್ಲಿ ಯಾವ ತಪ್ಪಿದೆ..? ಶಿರಾದಲ್ಲಿ ವಿಜಯೇಂದ್ರ ಏನ್ಮಾಡ್ತಿದ್ದಾರೆ. ಬಿಜೆಪಿ ಉಸ್ತುವಾರಿಗಳು ಎಲ್ಲಿಯವರು..?. ಆರೆಸ್ಸೆಸ್ ಕಾರ್ಯಕರ್ತರು ಎಲ್ಲಿಯವರು ಎಂದು ಪ್ರಶ್ನಿಸಿದರು.