ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಲಾದ ಗಣೇಶ ಮೂರ್ತಿಗಳನ್ನು ಸಂಪೂರ್ಣ ನಿಷೇಧಿಸಿರುವ ಹಿನ್ನೆಲೆ, ಪಾಲಿಕೆ ಅಧಿಕಾರಿಗಳು ಪಿಒಪಿ ಗಣೇಶ ಮಾರಾಟ ಮಾಡುವ ಸ್ಥಳಕ್ಕೆ ತೆರಳಿ ಗಣೇಶ ಮೂರ್ತಿಗಳನ್ನು ಜಪ್ತಿ ಮಾಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಯಲಹಂಕ ವಲಯದ ಎಸ್ಟಿಮ್ ಮಾಲ್ ಮುಂಭಾಗದ, ಹೆಬ್ಬಾಳ ಕೆರೆ ಬಳಿಯ ಪಾದಚಾರಿ ಮಾರ್ಗದಲ್ಲಿ ಅನಧಿಕೃತವಾಗಿ ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟಕ್ಕೆ ಇಡಲಾಗಿತ್ತು. ಮಾರಾಟಕ್ಕಿಟ್ಟ 70 ಮೂರ್ತಿಗಳನ್ನು ಇಂದು ಯಲಹಂಕ ವಲಯದ ಜಂಟಿ ಆಯುಕ್ತ ಡಾ. ಅಶೋಕ್ ಮತ್ತು ಆರೋಗ್ಯ ವೈದ್ಯಾಧಿಕಾರಿ ಡಾ. ನವೀನ್ ಕುಮಾರ್ ತಂಡ ಜಪ್ತಿ ಮಾಡಿದ್ದಾರೆ.
ಅಲ್ಲದೇ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರ ಎಸ್.ಕೆ. ಗಾರ್ಡನ್ ವಾರ್ಡ್ ಪಾಟರಿ ಟೌನ್ನಲ್ಲಿ 8 ಗಣೇಶ ಮೂರ್ತಿಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಿರುವ ಎಲ್ಲಾ ಪಿಒಪಿ ಗಣೇಶ ಮೂರ್ತಿಗಳನ್ನು ಯಲಹಂಕ ವಲಯದ ರೇವಾ ಕಾಲೇಜು ಬಳಿ, ಖಾಸಗಿ ಜಾಗದಲ್ಲಿ ಅಳವಡಿಸುವ ಶೆಡ್ಡರ್ ಮತ್ತು ಚಾಪರ್ ಯಂತ್ರದಿಂದ ಪುಡಿ ಮಾಡಲಾಗುತ್ತಿದೆ ಎಂದು ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.