ಬೆಂಗಳೂರು : ರಾಜ್ಯ ಸರ್ಕಾರ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ನಿರ್ಮಾಣ ಮಾಡಿರುವ ಹಿನ್ನೆಲೆಯಲ್ಲಿ ನೈಸ್ ರಸ್ತೆಯ ಅವಶ್ಯಕತೆಯಿಲ್ಲ. ಹೀಗಾಗಿ ನೈಸ್ ಯೋಜನೆಯನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಮಾಜಿ ಸಚಿವ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಸ್ ಯೋಜನೆಗೆ ಸಂಬಂಧಿಸಿದಂತೆ ನಾನೇ 2016ರಲ್ಲಿ ಸದನ ಸಮಿತಿ ವರದಿ ಕೊಟ್ಟಿದ್ದೇನೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಹೆಚ್ಚುವರಿ ಭೂಮಿಯನ್ನು ಹಿಂಪಡೆಯಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದರು.
ನೈಸ್ ಯೋಜನೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವಿನ ಆರೋಪ-ಪ್ರತ್ಯಾರೋಪಗಳ ಬಗ್ಗೆ ನೀವು ಅವರಿಬ್ಬರನ್ನೇ ಕೇಳಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಬುಧವಾರ ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕರೆದಿದ್ದು, ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯನ್ವಯ ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಆದರೆ, ಕಳೆದ ಏಳು ವರ್ಷಗಳಿಂದ ಕೇಂದ್ರ ಸರ್ಕಾರ ಹಣವನ್ನೇ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರದ ಬಜೆಟ್ನಲ್ಲಿ 5 ಸಾವಿರ ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದು ಕೇಂದ್ರದ ಯೋಜನೆಯಾಗಲಿ ಅಥವಾ ರಾಜ್ಯ ಸರ್ಕಾರದ ಯೋಜನೆಯೇ ಆಗಲಿ, ಕೇಂದ್ರ ಸರ್ಕಾರ ಯಾವುದೇ ಮಾನದಂಡದಲ್ಲಿ ಗುರುತಿಸಲಿ, ಕಗ್ಗಂಟಿಲ್ಲದೆ ಹಣ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದ ಅವರು, ಯೋಜನೆಗೆ ರಾಜ್ಯ ಸರ್ಕಾರ 20 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದ ಬಳಿಕ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಬಜೆಟ್ನಲ್ಲಿ ಅಳವಡಿಸಿಕೊಳ್ಳುವುದು ಸಂಪ್ರದಾಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಷ್ಟು ಹಣ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಎಷ್ಟು ವೆಚ್ಚ ಮಾಡಿದೆ. ಬಾಕಿ ಎಷ್ಟು ಬಿಡುಗಡೆ ಮಾಡಲಿದೆ ಎಂಬ ವಿವರಗಳನ್ನು ಮುಂದಿನ ದಿನಗಳಲ್ಲಿ ಮಾಹಿತಿ ಪಡೆದು ನೀಡುವುದಾಗಿ ಇದೇ ವೇಳೆ ಜಯಚಂದ್ರ ತಿಳಿಸಿದರು.
ಇದಕ್ಕೂ ಮುನ್ನ ಅಪರ ಮುಖ್ಯ ಕಾರ್ಯದರ್ಶಿ ಯೋಜನೆ ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಮುಖ್ಯಸ್ಥೆ ಶಾಲಿನಿ ರಜನೀಶ್ ಅವರೊಂದಿಗೆ ಸಭೆ ನಡೆಸಿ, ಕೇಂದ್ರ ಸರ್ಕಾರದ ಎದುರು ಬಾಕಿ ಇರುವ ರಾಜ್ಯದ ಯೋಜನೆಗಳ ಬಗ್ಗೆ ಚರ್ಚಿಸಿದರು.
ಇದನ್ನೂ ಓದಿ: ನೈಸ್ ವಿಚಾರದಲ್ಲಿ ಸಣ್ಣ ಸಾಕ್ಷಿ ತೋರಿಸಿದರೂ ದೇವೇಗೌಡರ ಕುಟುಂಬವೇ ರಾಜಕೀಯ ನಿವೃತ್ತಿ : ಕುಮಾರಸ್ವಾಮಿ ಸವಾಲು