ಬೆಂಗಳೂರು: ರಾಜಕಾರಣದಲ್ಲಿ ರಾಜಕೀಯವೇ ಬೇರೆ ವೈಯಕ್ತಿಕ ವಿಚಾರವೇ ಬೇರೆ. ಅವರ ರಾಜಕೀಯ ಅವರು ಮಾಡುತ್ತಾರೆ ನಮ್ಮ ರಾಜಕೀಯ ನಾವು ಮಾಡುತ್ತೇವೆ. ವಿಶ್ವಾಸದ ವಿಚಾರ ಬಂದಾಗ ಎಲ್ಲರೂ ಒಂದೇ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಹೆಚ್ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಎಲ್ಲರೂ ವಿಶ್ವಾಸದಿಂದಲೇ ಇರುತ್ತಾರೆ. ಆದ್ರೆ ರಾಜಕೀಯವೇ ಬೇರೆ. ರಾಜಕೀಯ ಅಂತ ಬಂದಾಗ ನಾವು ಬಿಜೆಪಿ ಪಕ್ಷದ ನಿಷ್ಠಾವಂತ ರಾಜಕಾರಣಿಗಳು. ಬಿಜೆಪಿ ಪಕ್ಷದ ಕಾರ್ಯಕರ್ತರು ನಮ್ಮನ್ನು ಆರಿಸಿ ತಂದಿದ್ದಾರೆ. ಪಕ್ಷ ಸಚಿವ ಸ್ಥಾನವನ್ನೂ ನೀಡಿದೆ. ಇನ್ನು ಮೇಲೆ ನಾವು ಆ ಕಡೆ ಈ ಕಡೆ ನೋಡುವ ವಿಚಾರವೇ ಇಲ್ಲ. ಒಗ್ಗಟ್ಟಾಗಿ ಬಿಜೆಪಿಗೆ ಬಂದಿದ್ದರಿಂದ ಒಂದೇ ಕಡೆ ಇದ್ದೇವೆ, ಒಂದೇ ಕಡೆ ಇರುತ್ತೇವೆ ಎಂದು ತಮ್ಮ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ವಿವರಣೆ ನೀಡಿದರು.
ಇದನ್ನೂ ಓದಿ : ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಸಚಿವರ ಅಸಮಾಧಾನ?
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡ್ರೆ ನಮಗೇನೂ ಸಮಸ್ಯೆ ಇಲ್ಲ. ವಿಲೀನ ಆದರೂ ಸರಿ ಆಗದಿದ್ದರೂ ಸರಿ. ನಾವು ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅದನ್ನೆಲ್ಲ ಪಕ್ಷದ ಹಿರಿಯರು ನೋಡಿಕೊಳ್ಳುತ್ತಾರೆ. ಈಗ ನಾವು ಬಿಜೆಪಿಗೆ ಬಂದಿದ್ದೇವೆ. ಹಾಗಾಗಿ ಆ ಪಕ್ಷದಲ್ಲಿ ಎಲ್ಲೋ ಒಂದು ಕಡೆ ನಾವೂ ಇದ್ದೇವೆ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಳಂಬ ಮತ್ತು ಕೆಲ ಸಚಿವರ ಮುನಿಸು ವಿಚಾರವಾಗಿ ಮಾತನಾಡಿ, ಯಾವ ಸಮಯದಲ್ಲಿ ಯಾವ ಕೆಲಸ ಆಗಬೇಕೋ ಅದು ಆಗುತ್ತದೆ. ನಾವು ಸಹ ಮುಂಬೈ ಅದು-ಇದು ಅಂತೆಲ್ಲಾ ಅಲೆದಾಡಿಲ್ಲವಾ? ನಾವ್ಯಾರೂ ದೂರ ಹೋಗಿಲ್ಲ, ಎಲ್ಲರೂ ಜೊತೆಗಿದ್ದೇವೆ. ಜೊತೆಯಾಗಿಯೇ ಇರುತ್ತೇವೆ. ನಂಬಿದವರನ್ನು ಪಕ್ಷ ಕೈಬಿಡುವುದಿಲ್ಲ ಎಂದು ಅಭಯ ನೀಡಿದರು.
ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆದಾಗ ಮಾತ್ರ ನಾನು ಮಾತನಾಡುತ್ತೇನೆ ಎಂದು ಹೇಳುವ ಮೂಲಕ ಇದೇ ವೆಳೆ ಡಿಕೆಶಿ ಹೇಳಿಕೆಗೆ ಸೋಮಶೇಖರ್ ವ್ಯಂಗ್ಯವಾಡಿದರು.
ಬಂಡೆ ಜಲ್ಲಿ ಇನ್ನೂ ಆಗಿಲ್ಲ, ಮುಂದೆ ಆಗ್ತಾರೆ. ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಎಲ್ಲಾ ಸಹಕಾರ ಕೊಡಬೇಕು. ಅವರೆಲ್ಲಾ ಒಂದು ಲೆವೆಲ್ಗೆ ಬೆಳೆದುಬಿಟ್ಟಿದ್ದಾರೆ. ನಾವೆಲ್ಲಾ ಈಗ ಕಣ್ಣು ಬಿಡ್ತಿದ್ದೇವೆ ಎಂದು ಮಾರ್ಮಿಕವಾಗಿ ನುಡಿದರು.