ಬೆಂಗಳೂರು: ನಿವೃತ್ತ ಮುಖ್ಯ ನ್ಯಾಯಮೂರ್ತಿ, ಮಾಜಿ ರಾಜ್ಯಪಾಲರಾಗಿದ್ದ ರಾಮಾ ಜೋಯಿಸ್ (91 ವರ್ಷ) ಬೆಳಗ್ಗೆ 7-30 ರ ವೇಳೆಗೆ ತಮ್ಮ ಸ್ವಗೃಹ ರಾಜಾಜಿನಗರದಲ್ಲಿ ಹೃದತಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ಪತ್ನಿ ವಿಮಲಾ ಜೋಯಿಸ್, ಮಗ ಎಮ್ ಆರ್ ಶೈಲೇಂದ್ರ, ಮಗಳು ಎಮ್ ಆರ್ ತಾರಾ ಅವರನ್ನು ಅಗಲಿದ್ದಾರೆ.
ಸಂಜೆ ಐದು ಗಂಟೆಗೆ ಚಾಮರಾಜಪೇಟೆ ಚಿತಾಗಾರದಲ್ಲಿ ವಿಧಿವಿಧಾನಗಳಂತೆ ಅಗ್ನಿಸ್ಪರ್ಶ ಆಗಲಿದೆ. ಅಗಲಿದ ರಾಮಾ ಜೋಯಿಸರಿಗೆ ಅನೇಕ ಗಣ್ಯರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರು ಸಂತಾಪ ಸೂಚಿಸಿದ್ದಾರೆ. ಸರ್ಕಾರದ ಪ್ರತಿನಿಧಿಗಳಾದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಚಿವರಾದ ಸುರೇಶ್ ಕುಮಾರ್, ಈಶ್ವರಪ್ಪ, ಕೆ. ಸುಧಾಕರ್, ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಬಳಿಕ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಯಿ, ರಾಮಾ ಜೋಯಿಸ್ ಅವರ ಜೀವನ ಒಂದು ತತ್ವ ಆದರ್ಶ, ಅವರು ಯಾವತ್ತು ತಮ್ಮ ತತ್ವ ಆದರ್ಶಗಳನ್ನ ಬಿಟ್ಟು ಬದುಕಿದವರಲ್ಲ. ವಕೀಲರಾಗಿ, ಹೈಕೋರ್ಟ್ ಚೀಫ್ ಜಸ್ಟೀಸ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ವಾಜಪೇಯಿ, ಅಡ್ವಾಣಿ, ರಾಜ್ಯದ ಬಿಜೆಪಿ ಜೊತೆಗೆ ಒಡನಾಟ ಹೊಂದಿದ್ದರು. ಬಿಹಾರ, ಜಾರ್ಖಂಡ್ ರಾಜ್ಯಪಾಲರಾಗಿ ಸಂವಿಧಾನ ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ. ವೈಯಕ್ತಿಕವಾಗಿ ನನ್ನ ಜೊತೆ ಒಳ್ಳೆಯ ಬಾಂಧವ್ಯವಿತ್ತು. ಸಾವಿರ ಜನರ ಮಧ್ಯೆ ಇದ್ರೂ ಕರೆದು ಮಾತನಾಡಿಸುತ್ತಿದ್ರು. ಒಳ್ಳೆ ಕೆಲಸ ಮಾಡಿದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ರು. ನನ್ನ ತಂದೆ ಎಸ್.ಆರ್. ಬೊಮ್ಮಾಯಿ ಅವರ ಜಡ್ಜ್ ಮೆಂಟ್ ಬಗ್ಗೆ ಸಾಕಷ್ಟು ಬಾರಿ ವಿಶ್ಲೇಷಣೆ ಮಾಡಿದ್ರು. ನಮ್ಮ ರಾಜ್ಯಕ್ಕೆ ಕಾನೂನು ಹಾಗೂ ಸಾರ್ವಜನಿಕ ಜೀವನಕ್ಕೆ ತಮ್ಮ ಆದರ್ಶ ಬಿಟ್ಟು ಹೋಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಡೆಯುವುದು ನಮ್ಮ ಕರ್ತವ್ಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಆಗಲಿಕೆಯನ್ನ ಬರಿಸುವ ಶಕ್ತಿಯನ್ನ ಅವರ ಕುಟುಂಬಕ್ಕೆ ದೇವರು ಕೊಡಲಿ ಎಂದರು.
ಓದಿ:ನಿವೃತ್ತ ನ್ಯಾ. ಎಂ ರಾಮಾ ಜೋಯಿಸ್ ನಿಧನ: ಬಿಜೆಪಿ ಮುಖಂಡರಿಂದ ಸಂತಾಪ
ಸಚಿವ ಈಶ್ವರಪ್ಪ ಮಾತನಾಡಿ, ರಾಮಾ ಜೋಯಿಸರು ನಮ್ಮನ್ನ ಬಿಟ್ಟು ಹೋಗಿದ್ದಾರೆ ಅನ್ನುವ ಸುದ್ದಿ ನಂಬಲು ಸಾಧ್ಯವಾಗುತ್ತಿಲ್ಲ. ನಾನು ಈ ಸ್ಥಿತಿಗೆ ಬರಲು ರಾಮಾ ಜೋಯಿಸರೇ ಕಾರಣ. ರಾಮಾ ಜೋಯಿಸರು ಹಾಗೂ ಸುಬ್ರಹ್ಮಣ್ಯ ಜೋಯಿಸರು ಶಿವಮೊಗ್ಗದಿಂದ ನನ್ನನ್ನು ರಾಷ್ಟ್ರೀಯ ಶಾಖೆಗೆ ಕರೆದುಕೊಂಡು ಹೋಗುತ್ತಿದ್ರು. ರಾಷ್ಟ್ರೀಯ ವಿಚಾರಗಳನ್ನ ರಾಷ್ಟ್ರೀಯ ಸ್ವಯಂ ಸೇವಕ್ ಸಂಘದ ಮುಖಾಂತರ ನಮಗೆ ತಿಳಿಯುವಂತೆ ಮಾಡಿದ್ರು. ಅವರು ಉನ್ನತ ಹುದ್ದೆಗೆ ಹೋದ್ರೂ, ನಮ್ಮಂತಹ ಸಾಮಾನ್ಯ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡುತ್ತಿದ್ರು. ಪೋನ್ ಮಾಡಿ ನಾವು ತೆಗೆದುಕೊಂಡು ನಿರ್ಧಾರದ ಬಗ್ಗೆ ಕೆಲವೊಮ್ಮೆ ಮಾರ್ಗದರ್ಶನ ಮಾಡುತ್ತಿದ್ರು. ಬುದ್ಧಿ ಹೇಳುತ್ತಿದ್ದ ಹಿರಿಯಣ್ಣನನ್ನ ಕಳೆದುಕೊಂಡಿದ್ದೇವೆ ಎಂದರು.
ಸಚಿವ ಡಾ. ನಾರಾಯಣಗೌಡರಿಂದ ಸಂತಾಪ:
ಮಾಜಿ ರಾಜ್ಯಪಾಲರು ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಎಂ.ರಾಮಾಜೋಯಸ್ ಅವರ ನಿಧನಕ್ಕೆ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾನೂನು ತಜ್ಞರಾಗಿದ್ದ ರಾಮಾಜೋಯಿಸ್ ಅವರು ರಚಿಸಿದ ಕೃತಿಗಳು ದೇಶದ ಕಾನೂನು ವ್ಯವಸ್ಥೆ, ಸಂವಿಧಾನದ ಕುರಿತು ಬೆಳಕು ಚೆಲ್ಲುವ ಪ್ರಯತ್ನವಾಗಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದ್ದರು. ನ್ಯಾಯಮೂರ್ತಿಗಳಾಗಿ ಐತಿಹಾಸಿಕ ತೀರ್ಪುಗಳನ್ನೂ ನೀಡಿದ್ದರು. ಅಲ್ಲದೆ ಆರ್ಎಸ್ಎಸ್ನ ನಿಷ್ಠಾವಂತ ಕಾರ್ಯಕರ್ತರಾಗಿ ಭಾರತೀಯ ಜನತಾ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದಿದ್ದಾರೆ.