ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ನಿಧನದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ 6 ಗಂಟೆಗೆ ರಾಜ್ಯದ 550 ಚಿತ್ರಮಂದಿರಗಳಲ್ಲಿ ಪುಷ್ಪಾಂಜಲಿ, ದೀಪಾಂಜಲಿ ಹಾಗೂ ಭಾಷ್ಪಾಂಜಲಿ ಜರುಗಿದವು.
ನಟ ಪುನೀತ್ ರಾಜ್‍ಕುಮಾರ್ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳ ಬಳಗ ಹೊಂದಿದ್ದು, ತಮ್ಮ ನೆಚ್ಚಿನ ನಟನ ಅಗಲಿಕೆಯಿಂದ ಸುಮಾರು 11 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿತ್ರರಂಗದ ಮೇರು ನಟನ ಅಂತಿಮ ದರ್ಶನವನ್ನು ಸುಮಾರು 25 ಲಕ್ಷ ಅಭಿಮಾನಿಗಳು ಕಣ್ತುಂಬಿಕೊಂಡಿದ್ದರು. ಚಿತ್ರ ವಿತರಕ ಮತ್ತು ಪ್ರದರ್ಶಕರು ಶ್ರದ್ಧಾಂಜಲಿ ಸಲ್ಲಿಸಲು ರಾಜ್ಯದ ಎಲ್ಲಾ ಸಿನಿಮಾ ಥಿಯೇಟರ್ ಗಳಲ್ಲಿ ಮೇಣದ ಬತ್ತಿ ಹಿಡಿದು ಪುನೀತ್ ಭಾವಚಿತ್ರಕ್ಕೆ ದೀಪಾಂಜಲಿ ಹಾಗು ಪುಷ್ಪಾಂಜಲಿ ಸಲ್ಲಿಸಿದರು.
ಕಂಠೀರವ ಸ್ಟುಡಿಯೋದತ್ತ ಹರಿದು ಬರುತ್ತಿರುವ ಜನ ಸಾಗರ:
ವಾರಾಂತ್ಯ ದಿನಗಳಲ್ಲಿ ನಟ ಪುನೀತ್ ಸಮಾಧಿಗೆ ಜನಸಾಗರವೇ ಹರಿದು ಬಂದಿದೆ. ಭಾನುವಾರ ಒಂದೇ ದಿನ 15 ಸಾವಿರಕ್ಕೂ ಹೆಚ್ಚು ಜನರು ಕಂಠೀರವ ಸ್ಟೂಡಿಯೋಗೆ ಬಂದು ಅಪ್ಪು ಸಮಾಧಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬೆಳಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ಅವಕಾಶ ನೀಡಲಾಗಿತ್ತು.
ಪುಣ್ಯಸ್ಮರಣೆ ಕಾರ್ಯಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ:
ಸೋಮವಾರ ಪುಣ್ಯಸ್ಮರಣೆ ಕಾರ್ಯಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ. ಅಪ್ಪು ಕುಟುಂಬದ ಸದಸ್ಯರು ನಾಳೆ ಬೆಳಗ್ಗೆ 11 ಗಂಟೆಗೆ ಬರುವ ಸಾಧ್ಯತೆ ಇದೆ. ಅವರು ಸಮಾಧಿ ದರ್ಶನ ಪಡೆದ ನಂತರ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ತೆಲುಗು ರಿಯಾಲಿಟಿ ಶೋನಲ್ಲಿ ಪುನೀತ್ ರಾಜಕುಮಾರ್ಗೆ ಶ್ರದ್ದಾಂಜಲಿ