ಬೆಂಗಳೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಬಿ.ಕಾಂ ಪದವಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪರೀಕ್ಷೆ ಬರೆಯವುದಕ್ಕಾದರೂ ಜಾಮೀನು ನೀಡುವಂತೆ ಕೋರಿ ಆರೋಪಿ ದರ್ಶನ್ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪೀಠವು ತನ್ನ ತೀರ್ಪಿನಲ್ಲಿ, ಆರೋಪಿ ವಿದ್ಯಾರ್ಥಿ ಮಾರ್ಚ್ 15ರಿಂದ 31ರವರೆಗೆ ಬಿ.ಕಾಂ ಪದವಿಯ 3ನೇ ಸೆಮಿಸ್ಟರ್ ಪರೀಕ್ಷೆ ಬರೆಯಬೇಕಿದ್ದು, ಜಾಮೀನು ಮಂಜೂರು ಮಾಡುವಂತೆ ಕೋರಿದ್ದಾನೆ. ಇದೇ ವೇಳೆ ಸರ್ಕಾರಿ ಅಭಿಯೋಜಕರು ಪ್ರಕರಣ ತನಿಖಾ ಹಂತದಲ್ಲಿದ್ದಾಗ ಆರೋಪಿಗೆ ಜಾಮೀನು ನೀಡಿದರೆ ತನಿಖೆಗೆ ತೊಂದರೆಯಾಗಲಿದೆ ಎಂದು ಆಕ್ಷೇಪಿಸಿದ್ದಾರೆ. ಆದರೆ, ಆರೋಪಿಯ ಭವಿಷ್ಯ ಪರಿಗಣಿಸಿ ಆತನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ಜಾಮೀನು ನೀಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ 19 ವರ್ಷದ ದರ್ಶನ್ ಎಂಬಾತನನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಅದರಂತೆ, ಪರಪ್ಪನ ಕೇಂದ್ರ ಕಾರಾಗೃಹ ಸೇರಿದ್ದ ಆರೋಪಿ ಯುವಕ, ಪರೀಕ್ಷೆ ಬರೆಯಲು ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ.
ಇದನ್ನೂ ಓದಿ: ಉಕ್ರೇನ್‌ನಲ್ಲಿ ಕದನ ವಿರಾಮ ಘೋಷಣೆ: ಭಾರತೀಯ ಸೇರಿದಂತೆ ಇತರ ನಾಗರಿಕರ ರಕ್ಷಣೆಗೆ ರಷ್ಯಾ ಸಮ್ಮತಿ