ಬೆಂಗಳೂರು: ಕೋವಿಡ್ನಿಂದಾಗಿ ಮಕಾಡೆ ಮಲಗಿದ್ದ ರಿಯಲ್ ಎಸ್ಟೇಟ್ ಉದ್ಯಮ ಯಥಾಸ್ಥಿತಿಗೆ ಮರಳುತ್ತಿರುವ ಬೆನ್ನಲ್ಲೇ ಬೆಂಗಳೂರು-ಮೈಸೂರು ದಶಪಥ ರಸ್ತೆ ಕಾಮಗಾರಿ ರಿಯಲ್ ಎಸ್ಟೇಟ್‌ಗೆ ಮತ್ತಷ್ಟು ಚೈತನ್ಯ ನೀಡಿದೆ.
ಬೆಂಗಳೂರು - ಮೈಸೂರು ನಡುವೆ ರಾಷ್ಟ್ರೀಯ ಹೆದ್ದಾರಿ 275ರ ಕಾಮಗಾರಿ ನಡೆಯುತ್ತಿದೆ. ಬೆಂಗಳೂರಿಗೆ ಹತ್ತಿರವಿರುವ ರಾಮನಗರ ಜಿಲ್ಲೆಯ ರಿಯಲ್ ಎಸ್ಟೇಟ್‌ಗೆ ಪೂರಕ ವಾತಾವರಣವಿದ್ದು, ಬೆಂಗಳೂರು, ಮೈಸೂರು ಹೊರತುಪಡಿಸಿದರೆ ರಾಮನಗರ ನೆನಪಾಗುತ್ತದೆ. ಇದರ ಜತೆಗೆ ಈಗಾಗಲೇ ಬೃಹತ್ ಕೈಗಾರಿಕೆಗಳ ಮೂಲಕ ವಿಶ್ವ ಭೂಪಟದಲ್ಲಿ ಸ್ಥಾನ ಪಡೆದುಕೊಂಡಿರುವ ಬಿಡದಿ ಹಾಗೂ ಬೈಪಾಸ್ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ರಿಯಲ್ ಎಸ್ಟೇಟ್ ಮೇಲಿನ ಹೂಡಿಕೆ ಭವಿಷ್ಯದಲ್ಲಿ ಹೆಚ್ಚಿನ ಲಾಭ ತಂದುಕೊಡಲಿದೆ. ಬೆಂಗಳೂರು - ಮೈಸೂರು ನಡುವಿನ ಭೂಮಿಗೆ ಹಿಂದಿನಿಂದಲೂ ಭಾರಿ ಬೇಡಿಕೆ ಇರುವುದು ಗೊತ್ತಿರುವ ಸಂಗತಿ. ಕೊರೊನಾ ನಂತರದ ಪರಿಸ್ಥಿತಿಯಲ್ಲಿ ರಿಯಲ್ ಎಸ್ಟೇಟ್ ಕುಸಿದಿದ್ದ ಪರಿಣಾಮ, ಕೃಷಿ ಭೂಮಿ ಬೆಲೆಯಲ್ಲಿ ಇಳಿಕೆಯಾಗಿತ್ತು. ಆದರೆ ಈಗ ಮತ್ತೆ ಏರಿಕೆ ಕಂಡಿದ್ದು, ಭೂಮಿ ಬೆಲೆಯೂ ಹೆಚ್ಚಾಗಿದೆ.
ಓದಿ: ಕೋವಿಡ್ ಲಸಿಕೆ ವಿಚಾರದಲ್ಲಿ ಪಾಲಿಟಿಕ್ಸ್ ಬೇಡ: ಡಿಸಿಎಂ ಅಶ್ವತ್ಥ ನಾರಾಯಣ
ಬಿಡದಿ ಬಳಿ ಒಟ್ಟು 6.9 ಕಿ.ಮೀ. ಬೈಪಾಸ್ ರಸ್ತೆ, ರಾಮನಗರದ ಬಸವನಪುರದಿಂದ ಚನ್ನಪಟ್ಟದ ಬೈರಾಪಟ್ಟಣದವರೆಗೆ ಬೈಪಾಸ್ಗೆ 22. 35 ಕಿ. ಮೀ. ವರೆಗೆ, ಮದ್ದೂರು ಬಳಿ 4.5. ಕಿ.ಮೀ, ಮಂಡ್ಯದಲ್ಲಿ 10 ಕಿ. ಮೀ. ಹಾಗೂ ಶ್ರೀರಂಗಪಟ್ಟಣದಲ್ಲಿ 8 ಕಿ. ಮೀ. ಉದ್ದದ ಬೈಪಾಸ್ ನಿರ್ಮಾಣವಾಗುತ್ತಿದೆ. 8 ಕಿ.ಮೀ. ಎಲಿವೇಟೆಡ್ ಕಾರಿಡಾರ್, ಹೈವೆಯಲ್ಲಿ ಒಟ್ಟು 9 ಪ್ರಮುಖ ಸೇತುವೆಗಳು, 44 ಕಿರುಸೇತುವೆಗಳು, 4 ರೈಲ್ವೆ ಮೇಲ್ಸೇತುವೆಗಳು ನಿರ್ಮಾಣವಾಗುತ್ತಿವೆ.
ಇನ್ನು ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿದ ನಂತರ ಬೆಂಗಳೂರಿನ ಕೆಂಗೇರಿ ಬಳಿಯಿಂದ ಮೈಸೂರಿನ ಕೊಲಂಬಿಯಾ ಆಸ್ಪತ್ರೆವರೆಗೆ ಪ್ರಸ್ತುತ ಇರುವ 135 ಕಿ.ಮೀ. 4 ಪಥದ ಹೆದ್ದಾರಿಯನ್ನು 10 ಪಥದ ರಸ್ತೆಯನ್ನಾಗಿ ವಿಸ್ತರಣೆ ಮಾಡಲಾಗುತ್ತಿದೆ. ಕೆಂಗೇರಿಯಿಂದ ಬಿಡದಿ, ರಾಮನಗರ, ಚನ್ನಪಟ್ಟಣ ಮತ್ತು ಮದ್ದೂರು ತಾಲೂಕಿನ ನಿಡಘಟ್ಟವರೆಗೆ 56.20 ಕಿಮೀ ರಸ್ತೆ ಕಾಮಗಾರಿ, ಎರಡನೇ ಪ್ಯಾಕೇಜ್‌ನಲ್ಲಿ ಮಂಡ್ಯ, ಶ್ರೀರಂಗಪಟ್ಟಣ ಮಾರ್ಗವಾಗಿ ಮೈಸೂರಿನ ಕೊಲಂಬಿಯ ಏಷ್ಯಾ ಆಸ್ಪತ್ರೆವರೆಗೂ 61.04 ಕಿ.ಮೀ. ರಸ್ತೆ ಕಾಮಗಾರಿ ನಡೆಯಲಿದೆ.