ಬೆಂಗಳೂರು: ನಾಳೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಿವಾಸ ಧವಳಗಿರಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅವಕಾಶ ಕೈತಪ್ಪದಂತೆ ಸಿ.ಪಿ. ಯೋಗೇಶ್ವರ್ ಲಾಬಿ ಮುಂದುವರೆಸಿದ್ದರೆ, ಭಾವಿ ಸಚಿವರು ಸಿಎಂ ಭೇಟಿಯಾಗಿ ಶುಭ ಕೋರುತ್ತಿದ್ದಾರೆ.
ಕಲಬುರಗಿ ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದಂತೆ ಸಂಪುಟ ಗೊಂದಲ ವಿಚಾರ ಸಂಬಂಧ ಧವಳಗಿರಿ ನಿವಾಸದಲ್ಲಿ ಪಕ್ಷದ ಮುಖಂಡರ ಜೊತೆ ಸಿಎಂ ಸಭೆ ನಡೆಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ಸಿ.ಪಿ ಯೋಗೇಶ್ವರ್ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಸಚಿವರ ಪಟ್ಟಿಯಲ್ಲಿ ಹೆಸರು ಕೈಬಿಡದಂತೆ ಸಿಎಂಗೆ ಮನವಿ ಮಾಡಿದರು.
ನಂತರ ನಾಳೆ ಪ್ರಮಾಣ ಸ್ವೀಕಾರಕ್ಕೆ ಸಿದ್ದರಾಗುವಂತೆ ಸಿಎಂ ಕರೆ ಹಿನ್ನೆಲೆ ಬೆನ್ನಲ್ಲೇ ಸಿಎಂ ಭೇಟಿಗೆ ಆಗಮಿಸಿದ ನೂತನ ಶಾಸಕರು ಸಿಎಂಗೆ ಶುಭ ಕೋರಿದರು. ಆನಂದ್ ಸಿಂಗ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಎಸ್.ಟಿ. ಸೋಮಶೇಖರ್ ಸೇರಿದಂತೆ ಹಲವು ಭಾವಿ ಸಚಿವರು ಸಂಪುಟದಲ್ಲಿ ಅವಕಾಶ ಕಲ್ಪಿಸುತ್ತಿರುವುದಕ್ಕೆ ಸಿಎಂಗೆ ಹೂಗುಚ್ಚ ನೀಡಿ ಕೃತಜ್ಞತೆ ಸಲ್ಲಿಸಿದರು. ನಂತರ ಕೆಲಕಾಲ ಅನೌಪಚಾರಿಕವಾಗಿ ಮಾತುಕತೆ ನಡೆಸಿದರು.