ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಮಾಜಿ ಸಂಸದ ವಿ.ಎಸ್. ಉಗ್ರಪ್ಪ ನೇತೃತ್ವದಲ್ಲಿ ತೆರಳಿದ್ದ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿದರು.
ದೂರು ಸಲ್ಲಿಕೆ ನಂತರ ಮಾತನಾಡಿದ ವಿ.ಎಸ್. ಉಗ್ರಪ್ಪ, ಶಿವಾಜಿನಗರದಲ್ಲಿ ತಮಿಳು ಭಾಷಿಕರ ವೋಲೈಕೆ ಆರೋಪ ಸಂಬಂಧ ದೂರು ನೀಡಿದ್ದೇವೆ. ನಿಮ್ಮದೇ ಭಾಷಿಕನಿಗೆ ಟಿಕೆಟ್ ಕೊಟ್ಟಿದ್ದೇವೆ. ಅವರನ್ನ ಗೆಲ್ಲಿಸಿಕೊಡಿ ಎಂದು ತಮಿಳುಭಾಷಿಕರ ಓಲೈಕೆ ಮಾಡಲಾಗಿದೆ. ಅನರ್ಹರನ್ನ ಸಚಿವರನ್ನಾಗಿ ಮಾಡುತ್ತೇವೆಂಬ ಭರವಸೆ ಕೊಡಲಾಗಿದೆ. ಕಾರ್ಯಕ್ರಮದಲ್ಲಿ ಜನರಿಗೆ ಬಹಿರಂಗ ಭರವಸೆ ನೀಡಲಾಗಿದೆ. ಸಚಿವರನ್ನ ಮಾಡ್ತೇವೆ ಎಂದು ಮತದಾರರ ಮನವೋಲೈಕೆ ಮಾಡಲಾಗಿದೆ. ಇವು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ಹೀಗಾಗಿ ಸಿಎಂ ಬಿಎಸ್ವೈ ವಿರುದ್ಧ ಕ್ರಮಕ್ಕೆ ದೂರಿನಲ್ಲಿ ಉಲ್ಲೇಖ ಮಾಡಿದ್ದೇವೆ ಎಂದರು.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರನ್ನು ಭೇಟಿ ಮಾಡಿ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲು, ಡಿಸಿಎಂ ಅಶ್ವಥನಾರಾಯಣ್ ವಿರುದ್ಧ ದೂರು ನೀಡಿದ್ದೇವೆ. 16 ಅನರ್ಹ ಶಾಸಕರು ಬಿಜೆಪಿ ಸೇರಿದ್ದಾರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಇವರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಮಾಡಲ್ ಕೋಡ್ ಆಫ್ ಕಂಡಕ್ಟ್ ಉಲ್ಲಂಘನೆ ಮಾಡಿದ್ದಾರೆ. ಇವರೆಲ್ಲರ ಕುಮ್ಮಕ್ಕಿನಿಂದ ಅವರು ಅವರನ್ನು ಸಚಿವರನ್ನಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ ಆರ್ ಶಂಕರ್ ಅವರನ್ನು ಎಂಎಲ್ಸಿ ಮಾಡುತ್ತೇವೆ ಎಂದು ಹೇಳಿದ್ದಾರೆ. ವಿಧಾನಸೌಧ ವ್ಯಾಪ್ತಿಯಲ್ಲಿ ಬರುವ ಶಿವಾಜಿನಗರ ಕ್ಷೇತ್ರಕ್ಕೆ ಸರವಣ ಅವರನ್ನು ಆಯ್ಕೆ ಮಾಡಿದ್ದೇವೆ. ಅವರು ತಮಿಳು ಭಾಷಿಕರಾದ್ದರಿಂದ ಅವರನ್ನು ಆಯ್ಕೆ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮ ಜರುಗುಸಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ ಎಂದರು.
ಎಲ್ಲಾ ಕ್ಷೇತ್ರದಲ್ಲಿ ನಾವು ನಮ್ಮ ಅಭ್ಯರ್ಥಿಗಳನ್ನು ನಾವು ಹಾಕುತ್ತೇವೆ. ಇವತ್ತು ರಾತ್ರಿ ಎಲ್ಲಾ ಲೀಸ್ಟ್ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.