ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣದಲ್ಲಿ ನಿರ್ದಿಷ್ಟ ಕೋಮಿಗೆ ಧಕ್ಕೆ ತಂದ ಆರೋಪ ಸಂಬಂಧ ವಕೀಲ ವರದರಾಜನ್ ಎಂಬುವರು ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಐವರು ಜನಪ್ರತಿನಿಧಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನಗರ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ, ಸಚಿವ ಕೆ.ಎಸ್.ಈಶ್ವರಪ್ಪ ಶಾಸಕರಾದ ಸತೀಶ್ ರೆಡ್ಡಿ, ಎಲ್.ಎ.ರವಿಸುಬ್ರಹ್ಮಣ್ಯ ಹಾಗೂ ಉದಯ್ ಗರುಡಾಚಾರ್ ವಿರುದ್ಧ ಎಫ್ಐಅರ್ ದಾಖಲಿಸಲು ಸೂಚನೆ ನೀಡಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಬಂಧ ವರದರಾಜನ್ ಪರವಾಗಿ ವಕೀಲ ರಾಜನ್ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಬಿಎಂಪಿ ಬೆಡ್ ಬ್ಲಾಕಿಂಗ್ ಹಗರಣ ಎಂದು ಹೇಳಿಕೊಂಡು ಸಂಸದರು ಹಾಗೂ ಶಾಸಕರು ವಾರ್ ರೂಂಗೆ ಹೋಗಿ ಗಲಾಟೆ ಮಾಡಿದ್ದಾರೆ. 17 ಜನರ ಮುಸ್ಲಿಂ ಹೆಸರು ಹೇಳಿ ಒಂದು ಕೋಮಿನ ವಿರುದ್ಧ ಟಾರ್ಗೆಟ್ ಮಾಡಿದ್ದಾರೆ. ವಾರ್ ರೂಂನಲ್ಲಿರುವವರು ಎಲ್ಲರೂ ಉಗ್ರಗಾಮಿಗಳೆಂದು ಸೋಷಿಯಲ್ ಮೀಡಿಯಾದಲ್ಲಿ ಮೆಸೇಜ್ಗಳನ್ನ ಮಾಡುತ್ತಿದ್ದಾರೆ. ವಾರ್ ರೂಂಗೆ ಎಂಟ್ರಿಯಾಗುವ ಅಧಿಕಾರ ಯಾರಿಗೂ ಇಲ್ಲ. ಹೀಗಿದ್ದರೂ ಸಂಸದರು ಎಂಎಲ್ಎಗಳು ವಾರ್ ರೂಂಗೆ ಹೋಗಿದ್ದು, ಗಲಾಟೆ ಮಾಡಿದ್ದು ಅಪರಾಧ. ಹೀಗಾಗಿ ಡಿಸಿ ಕಚೇರಿಗೆ ಬಂದು ದೂರು ನೀಡಿದ್ದೇನೆ ಎಂದರು.
ಎರಡು ಕೋಮುಗಳ ನಡುವೆ ಸೌಹಾರ್ದತೆ ಹಾಳುಗೆಡುವುದು, ವಾರ್ ರೂಂಗೆ ಅತಿಕ್ರಮ ಪ್ರವೇಶದ ಆರೋಪದಡಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಮಂಜುನಾಥ್ ಮಾತನಾಡಿ, ವರದರಾಜನ್ ಮತ್ತು ವಕೀಲ ಬಾಲನ್ ಎಂಬುವರು ಬಂದು ದೂರು ದಾಖಲಿಸಿದ್ದಾರೆ. ಸಿದ್ದಾಪುರ ಪೊಲೀಸರಿಗೆ ತನಿಖೆ ನಡೆಸಬೇಕೆಂದು ಸೂಚನೆ ಕೊಡಬೇಕೆಂದು ಬಂದಿದ್ದರು. ಈಗಾಗಲೇ ಎಫ್ಐಆರ್ ದಾಖಲಾಗಿದೆ. ಅವೆಲ್ಲವನ್ನ ನೋಡಬೇಕೆಂದು ವಕಾಲತ್ತು ಪ್ರತಿ ಕೊಟ್ಟಿದ್ದಾರೆ ಎಂದರು.
ಲಾಕ್ಡೌನ್ ಜಾರಿ ಸಂಭವ ಪ್ರಶ್ನೆಗೆ ಉತ್ತರಿಸಿದ ಡಿಸಿ, ರಾಜ್ಯ ಸರ್ಕಾರ ಏನು ಹೇಳುತ್ತೆ ಅದನ್ನು ಅನುಷ್ಠಾನಕ್ಕೆ ತರುತ್ತೇವೆ. ಸರ್ಕಾರ ಸೂಚನೆ ಅನ್ವಯ ನಾವು ಕ್ರಮ ಕೈಗೊಳ್ಳುತ್ತೇವೆ. ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ ಏನು ಮಾಡಬೇಕು ಎಲ್ಲವನ್ನು ಮಾಡುತ್ತೇವೆ ಎಂದರು.