ಬೆಂಗಳೂರು: ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಫ್ರೇಜರ್ ಟೌನ್ ವಾರ್ಡ್ ಹೇನ್ಸ್ ರಸ್ತೆಯ 25 ಕೋಟಿ ರೂ. ಬೆಲೆ ಬಾಳುವ ಪಾಲಿಕೆ ಸ್ವತ್ತನ್ನು ಕಬಳಿಸಲು ಯತ್ನಿಸಿದ್ದಾರೆಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್ ರಮೇಶ್ ಬಿಎಂಟಿಎಫ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾಜಿ ಶಾಸಕ ಹಮೀದ್ ಶಾ ಅವರಿಗೆ ಹಸುಗಳ ಸಾಕಾಣಿಕೆಗೆ 50 ವರ್ಷಗಳ ಅವಧಿಗೆ, ವರ್ಷಕ್ಕೆ 600 ರೂ ಅಂತೆ, 1975 ರಲ್ಲಿ ಗುತ್ತಿಗೆಗೆ ನೀಡಲಾಗಿತ್ತು. ಬಳಿಕ ಅವರ ಪತ್ನಿ ಫಮೀದಾ ಬೇಗಂ ಹೆಸರಿಗೆ ಗುತ್ತಿಗೆ ಪತ್ರ ಮಾಡಲಾಗಿತ್ತು. ಆದರೆ ಹಸುಗಳ ಸಾಕಾಣಿಕೆಗೆ ಕೊಟ್ಟ ಜಾಗದಲ್ಲಿ ಈಗ ವಸತಿ- ವಾಣಿಜ್ಯ ಕಟ್ಟಡಗಳು ತಲೆ ಎತ್ತಿವೆ. ಜೊತೆಗೆ ಗುತ್ತಿಗೆ ಅವಧಿ ಇನ್ನೂ 35 ವರ್ಷಕ್ಕೆ ಮುಂದುವರಿಸಲು ಮನವಿ ಮಾಡಿದ್ದು, ಆ ಕಡತ ಆಸ್ತಿಗಳು ವಿಶೇಷ ಆಯುಕ್ತರ ಕಚೇರಿಯಲ್ಲಿ ಧೂಳು ಹಿಡಿಯುತ್ತಿವೆ.
ಹೀಗಾಗಿ ಸ್ವತ್ತನ್ನು ಗುತ್ತಿಗೆಗೆ ಪಡೆದು ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿದವರು ಹಾಗೂ ಸಹಕರಿಸಿದ ಕಂದಾಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.