ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಐಎಂಎ ಸಂಸ್ಥೆಯ ಆಸ್ತಿ ಮುಟ್ಟುಗೋಲು ಹಾಕಿಕೊಂಡಿರುವ ರಾಜ್ಯ ಸರ್ಕಾರ, ಶೀಘ್ರದಲ್ಲೇ ಅಧಿಕಾರಿಗಳಿಂದ ಮಹಜರು ಮಾಡಿಸಿ ಸ್ಥಳದಲ್ಲಿ ಕರಪತ್ರ ಅಂಟಿಸಲಿದೆ.
ಈಗಾಗಲೇ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ ಹಾಗೂ ಹಾಸನ ಜಿಲ್ಲೆಗಳಲ್ಲಿ 300 ಕೋಟಿ ರೂ. ಮೌಲ್ಯದ ಜಮೀನು ಹಾಗೂ ಕಟ್ಟಡಗಳ ಜಪ್ತಿ ಮಾಡಿದೆ. ಬೆಂಗಳೂರಿನ ಆಭರಣ ಮಳಿಗೆಗಳಿಂದ ಕೋಟ್ಯಂತರ ರೂ.ಮೌಲ್ಯದ ಚಿನ್ನಾಭರಣವನ್ನು ಎಸ್ಐಟಿ ಜಪ್ತಿ ಮಾಡಿಕೊಂಡಿತ್ತು. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಬೆಂಗಳೂರು ನಗರ ಪ್ರಾದೇಶಿಕ ಆಯುಕ್ತೆ ಹಾಗೂ ಸಕ್ಷಮ ಪ್ರಾಧಿಕಾರಿಯಾಗಿರುವ ರಶ್ಮಿ ಮಹೇಶ್, ವಶಪಡಿಸಿಕೊಳ್ಳಲಾಗಿರುವ ಆಸ್ತಿಗಳ ಮೇಲೆ, ಈ ಸ್ವತ್ತು ಸರ್ಕಾರ ವಶಪಡಿಸಿಕೊಳ್ಳಲಾಗಿದೆ ಎಂದು ನಾಮಫಲಕ ಹಾಕಬೇಕು. ಅಲ್ಲದೆ, ಫೋಟೋ ಅಥವಾ ವಿಡಿಯೋ ಮಾಡಿ ದಾಖಲೆ ಒದಗಿಸಬೇಕೆಂದು ಆಯಾ ಜಿಲ್ಲಾಧಿಕಾರಿಗಳಿಗೆ ಸಕ್ಷಮ ಪ್ರಾಧಿಕಾರದಿಂದ ಪತ್ರ ಬರೆಯಲಾಗಿದೆ.
ಇನ್ನು ಬೆಂಗಳೂರು ನಗರದಲ್ಲಿರುವ ಆಸ್ತಿಗಳ ಬಗ್ಗೆ ಬಿಬಿಎಂಪಿ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಕೆಪಿಐಡಿ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳ ಮಹಜರು ಇನ್ನಷ್ಟೇ ನಡೆಯಬೇಕಿದೆ. ಮಹಜರು ಪೂರ್ಣಗೊಂಡ ಬಳಿಕ ವಿಡಿಯೋ ಹಾಗೂ ಫೋಟೋ ಸಮೇತ ವರದಿ ಸಿದ್ಧಪಡಿಸಿ, ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಸಕ್ಷಮ ಪ್ರಾಧಿಕಾರಿ ರಶ್ಮಿ ಮಹೇಶ್ ತಿಳಿಸಿದ್ದಾರೆ.