ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮುಗಿದು ಫಲಿತಾಂಶವೂ ಪ್ರಕಟಗೊಂಡಿದೆ. ಇದೀಗ ಪಂಚಾಯಿತಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪೈಪೋಟಿ ಆರಂಭವಾಗಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಕಸರತ್ತು ನಡೆಯುತ್ತಿದೆ.
ರಾಜ್ಯದ 30 ಜಿಲ್ಲೆಗಳ 226 ತಾಲೂಕಿನ 5,728 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ 8,153 ಸ್ಥಾನಗಳಿಗೆ ಅವಿರೋಧ ಆಯ್ಕೆ ಸೇರಿದಂತೆ ಒಟ್ಟು 90,729 ಚುನಾಯಿತ ಸದಸ್ಯರು ಆಯ್ಕೆಯಾಗಿದ್ದಾರೆ. ವಿವಿಧ ಕಾರಣಗಳಿಂದಾಗಿ 610 ಸ್ಥಾನಗಳು ಖಾಲಿ ಉಳಿದಿವೆ.
ಅನುಸೂಚಿತ ಜಾತಿಯ 18,395 ಸದಸ್ಯರು, ಅನುಸೂಚಿತ ಪಂಗಡದ 10,527 ಸದಸ್ಯರು, ಹಿಂದುಳಿದ ಎ ವರ್ಗಗಳ 12,942 ಸದಸ್ಯರು, ಹಿಂದುಳಿದ ಬಿ ವರ್ಗಗಳ 3,126 ಸದಸ್ಯರು, ಸಾಮಾನ್ಯ ವರ್ಗದ 45,739 ಮಂದಿ ನೂತನವಾಗಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಈ ಚುನಾವಣೆಯಲ್ಲಿ ತಾ ಮುಂದು, ನಾ ಮುಂದು ಎಂದು ಆಡಳಿತ ಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಹಾಗಾಗಿ ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ತಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದಲ್ಲಿ ಕೂರಿಸಲು ನಾಯಕರು ತಂತ್ರ ಹೆಣೆಯಲು ಶುರು ಮಾಡಿದ್ದಾರೆ.
ಗೆಲುವು ಸಾಧಿಸಿದ ಕೆಲ ಅಭ್ಯರ್ಥಿಗಳು ಸಂಭ್ರಮದಲ್ಲಿದ್ದರೆ, ಅಧ್ಯಕ್ಷ, ಉಪಾಧ್ಯಕ್ಷ ಗಾದಿಯ ಮಹತ್ವಾಕಾಂಕ್ಷೆಯಲ್ಲಿರುವವರು ಸರ್ಕಾರ ಪ್ರಕಟಿಸುವ ಮೀಸಲಾತಿಯನ್ನು ಎದುರು ನೋಡುತ್ತಿದ್ದಾರೆ.
ಸ್ಥಳೀಯ ಶಾಸಕರು ಹೆಚ್ಚಿನ ಪಂಚಾಯಿತಿಗಳನ್ನು ತಮ್ಮ ಕೈವಶ ಮಾಡಿಕೊಳ್ಳಲು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಅಗತ್ಯ ಮೀಸಲಾತಿ ರೂಪಿಸುವ ಯೋಜನೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಪಕ್ಷ ರಹಿತವಾಗಿ ಗ್ರಾಮ ಪಂಚಾಯಿತಿ ಚುನಾವಣೆ ನಡೆದರೂ ಪರೋಕ್ಷವಾಗಿ ರಾಜಕೀಯ ಪಕ್ಷಗಳ ದರ್ಬಾರೇ ಹೆಚ್ಚಾಗಿತ್ತು. ಈಗ ಪಂಚಾಯಿತಿಗಳ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತಂತ್ರ ರೂಪಿಸುತ್ತಿವೆ. ಮೊದಲ ಸ್ಥಾನದಲ್ಲಿರುವ ಬಿಜೆಪಿ ಪಕ್ಷೇತರ ಅಭ್ಯರ್ಥಿಗಳನ್ನು ಸೆಳೆದು ಹೆಚ್ಚು ಪಂಚಾಯಿತಿಗಳನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನಕ್ಕೆ ಈಗಾಗಲೇ ಕೈ ಹಾಕಿದೆ. ಹಲವು ಪಂಚಾಯಿತಿಗಳಲ್ಲಿ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವ ಮಾತುಕತೆಗಳು ಶುರುವಾಗಿವೆ ಎಂದು ಹೇಳಲಾಗುತ್ತಿದೆ.
ಮುಂದಿನ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ, 2023ರ ವಿಧಾನಸಭೆ ಚುನಾವಣೆಗಳಿಗೆ ಪಂಚಾಯಿತಿ ಚುನಾವಣೆ ಫಲಿತಾಂಶ ದಿಕ್ಸೂಚಿಯಾಗಿರುವ ಹಿನ್ನೆಲೆ ಹೆಚ್ಚು ಪಂಚಾಯಿತಿಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತಂತ್ರ, ಪ್ರತಿತಂತ್ರಗಳನ್ನು ಹೆಣೆಯುತ್ತಿವೆ.
ತಮ್ಮ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸ್ಥಾನದಲ್ಲಿ ಗೆದ್ದರೂ ಮೀಸಲಾತಿ ವೇಳೆ ಅಧಿಕಾರ ಹಿಡಿಯುವಲ್ಲಿ ವಂಚಿತರಾಗುವ ಸಾಧ್ಯತೆಗಳಿವೆ. ಹೀಗಾಗಿ, ಪ್ರತಿಪಕ್ಷಗಳು ಎಚ್ಚರಿಕೆಯ ಹೆಜ್ಜೆ ಇಡುತ್ತಿವೆ. ಹಲವು ಪಂಚಾಯಿತಿಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ನಿರ್ಣಾಯಕವಾಗಲಿದ್ದಾರೆ. ಯಾವ ಪಂಚಾಯಿತಿ ಯಾವ ಪಕ್ಷದ ಪಾಲಾಗಲಿವೆ ಮತ್ತು ಯಾರು ಅಧಿಕಾರ ಹಿಡಿಯಲಿದ್ದಾರೆ ಎಂಬುದು ಮೀಸಲಾತಿ ಪ್ರಕಟವಾದ ನಂತರ ಗೊತ್ತಾಗಲಿದೆ.
ಇದನ್ನೂ ಓದಿ: ನನ್ನ ರಾಜೀನಾಮೆಯನ್ನು ನಾನು ಸಿದ್ದಾರ್ಥ್ ಹೆಗ್ಡೆ ಸೇರಿ ಡಿಸೈಡ್ ಮಾಡಿದ್ದು: ಅಣ್ಣಾಮಲೈ