ಬೆಂಗಳೂರು: ಆನೆ ಸೇರಿದಂತೆ ಕಾಡು ಪ್ರಾಣಿಗಳಿಂದ ಉಂಟಾಗುವ ಬೆಳೆ ನಷ್ಟ ಪರಿಹಾರವನ್ನು ಹೆಚ್ಚಿಸಲು ಚಿಂತಿಸಲಾಗಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಶಾಸಕ ಎಚ್.ಎನ್.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆನೆ ಹಾವಳಿ ಹೆಚ್ಚಾಗಿರುವ ಕ್ಷೇತ್ರಗಳ ಶಾಸಕರ ಸಭೆಯನ್ನು ಮೂರು ದಿನಗಳ ಹಿಂದಷ್ಟೇ ನಡೆಸಿ ಸಲಹೆ ಪಡೆಯಲಾಗಿದೆ. ಕಾಡು ಪ್ರಾಣಿಗಳಿಂದ ಉಂಟಾಗುವ ಪ್ರಾಣಹಾನಿಗೆ 7.50 ಲಕ್ಷ ರೂ.ನೀಡಲಾಗುತ್ತಿದೆ. ಹಾಸನ ಭಾಗದಲ್ಲಿ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ ಎಂದರು.
ಬಳಿಕ ಶಾಸಕ ನಾರಾಯಣಸ್ವಾಮಿ ಮಾತನಾಡಿ, ತಮಿಳುನಾಡು, ಆಂಧ್ರಪ್ರದೇಶದ ಗಡಿಭಾಗದಲ್ಲಿ ಆನೆಗಳು ಹಿಂಡು - ಹಿಂಡಾಗಿ ಬಂದು ಬೆಳೆ ಹಾನಿ ಮಾಡುವುದರಿಂದ ಕೋಟ್ಯಂತರ ರೂ. ನಷ್ಟವಾಗುತ್ತಿದೆ ಎಂದಾಗ, ಸಭಾಧ್ಯಕ್ಷ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ ನಮ್ಮ ರಾಜ್ಯದ ಆನೆಗಳೋ ಇಲ್ಲವೇ ಬೇರೆ ರಾಜ್ಯದ ಆನೆಗಳೋ ಎಂದು ಕೇಳಿದರು.
ಮಧ್ಯಪ್ರವೇಶಿಸಿದ ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, ಅರಣ್ಯದಿಂದ ಹೊರ ಹೋಗದಂತೆ ಆನೆಗಳಿಗೆ ತೋಡಲಾಗುತ್ತಿದ್ದ ಕಂದಕ ವಿದ್ಯುತ್ ಬೇಲಿಗೆ ಹಣವಿಲ್ಲದಂತಾಗಿದೆ. ಬೆಳೆ ಪರಿಹಾರ ವಿಳಂಬವಾಗುತ್ತಿದ್ದು, ತುರ್ತಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಶಾಸಕ ಮಸಾಲೆ ಜಯರಾಮ್ ಫೋಟೋ ಪ್ರದರ್ಶಿಸಿ ಚಿರತೆ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ ಎಂದು ಹೇಳಿದಾಗ, ಸಚಿವ ಆನಂದ್ ಸಿಂಗ್ ಅವರು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಐದು ಬಾರಿ ಆನೆ ದಾಳಿ ಮಾಡಿದ್ದು, ಬೆಳೆ ಹಾನಿಗೆ 18.92 ಲಕ್ಷ ದಯಾತ್ಮಕ ಧನವನ್ನು ಪಾವತಿಸಲಾಗಿದೆ ಎಂದು ಹೇಳಿದರು.
ಪರಿಹಾರ : ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯಲು ಜಮೀನುಗಳಿಗೆ ಬೇಲಿ ನಿರ್ಮಿಸಿಕೊಳ್ಳುವ ರೈತರಿಗೆ ಶೇ.50ರಷ್ಟು ಸಹಾಯಧನ ನೀಡಲಾಗುವುದು ಎಂದು ಜೆಡಿಎಸ್ ಶಾಸಕ ಎಂ.ವಿ.ವೀರಭದ್ರಯ್ಯ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಮಧುಗಿರಿ ತಾಲೂಕಿನ ಜಯಮಂಗಲಿ ಕೃಷ್ಣಮೃಗ ಸಂರಕ್ಷಿತ ಪ್ರದೇಶದ ವಿಸ್ತೀರ್ಣ 798.33 ಎಕರೆ ಇದ್ದು ಸುಮಾರು 500 ಕೃಷ್ಣಮೃಗಗಳಿವೆ ಎಂದು ಅಂದಾಜಿಸಲಾಗಿದೆ. ಹೆಬ್ಬೇವು ತೋಪು, ರಾಗಿ, ಜೋಳ, ಹಲಸಂಧೆ ಬೆಳೆದು ಆಹಾರ ಒದಗಿಸುವ ಪ್ರಯತ್ನ ಮಾಡಲಾಗಿದೆ. ಬೋರ್ವೆಲ್ ಮೂಲಕ ನೆಲಮಟ್ಟದ ತೊಟ್ಟಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಭೂಸ್ವಾಧೀನಕ್ಕೆ ಚಿಂತನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.