ಬೆಂಗಳೂರು: ಪಾರಂಪರಿಕ ಕಟ್ಟಡಗಳ ರಕ್ಷಣೆಗಾಗಿ ರಾಜ್ಯಾದ್ಯಂತ ಪ್ರತಿ ಜಿಲ್ಲಾ ಮಟ್ಟದಲ್ಲೂ ಪಾರಂಪರಿಕ ಸಂರಕ್ಷಣಾ ಸಮಿತಿ ರಚಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮೈಸೂರಿನ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ ಡೌನ್ ಕಟ್ಟಡಗಳನ್ನು ತೆರವುಗೊಳಿಸುವ ಕ್ರಮ ಪ್ರಶ್ನಿಸಿ ಪ್ರೊ. ಡಿ. ಶ್ರೀಜಯದೇವರಾಜ ಅರಸ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠ, 'ವಲಯ ನಿರ್ಬಂಧ ತಿದ್ದುಪಡಿ ಕಾಯ್ದೆ-2020'ರ ಪ್ರಕಾರ ಯಾವುದೇ ಪಾರಂಪರಿಕ ಕಟ್ಟಡಗಳನ್ನು ತೆರವು ಮಾಡುವ ಮುನ್ನ ಪಾರಂಪರಿಕ ಸಮಿತಿಗಳು ಆ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕಾಗುತ್ತದೆ. ಹೀಗಾಗಿ ಸಮಿತಿ ಪರಿಶೀಲಿಸುವವರಗೆ ಪ್ರಕರಣದಲ್ಲಿನ ಕಟ್ಟಡಗಳ ತೆರವು ವಿಚಾರದಲ್ಲೂ ಯಾವುದೇ ಆತುರದ ನಿರ್ಧಾರ ಬೇಡ. ಅದಕ್ಕಾಗಿ ಸರ್ಕಾರ ಜಿಲ್ಲಾ ಸಮಿತಿಗಳನ್ನು ರಚಿಸಬೇಕು, ಸಮಿತಿ ಪರಿಶೀಲಿಸಿ ನಿಲುವು ತಿಳಿಸಿದ ನಂತರವೇ ನ್ಯಾಯಾಲಯ ಆ ಬಗ್ಗೆ ನಿರ್ಧರಿಸಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಇದನ್ನೂ ಓದಿರಿ: ಕೇಸ್ ವಾಪಸ್ ಪಡೆಯಲು ಹೋಗಿ ಸ್ಟೇಷನ್ನಲ್ಲೇ ಖಾಕಿ ಮೇಲೆ ಹಲ್ಲೆ... ಇಬ್ಬರು ಆಸ್ಪತ್ರೆಗೆ ದಾಖಲು
ಅಲ್ಲದೇ, ಮೈಸೂರು ಜಿಲ್ಲೆಗೆ ಪಾರಂಪರಿಕ ಸಂರಕ್ಷಣಾ ಸಮಿತಿ ರಚಿಸಲು ಕಳೆದ ಜೂನ್ 6ರಂದೇ ಸೂಚಿಸಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲವೇಕೆ? ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು. ಜತೆಗೆ, ಸರ್ಕಾರ ಕೂಡಲೇ ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾ ಮಟ್ಟದ ಪಾರಂಪರಿಕ ಸಂರಕ್ಷಣಾ ಸಮಿತಿ ರಚಿಸಬೇಕು. ಈ ಆದೇಶದ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಿತು. ಇದೇ ವೇಳೆ ಮೈಸೂರು ಮಹಾನಗರ ಪಾಲಿಕೆ ಅನುಮತಿ ನೀಡಿಲ್ಲವಾದ್ದರಿಂದ ಪ್ರಕರಣದಲ್ಲಿನ ಪಾರಂಪರಿಕ ಕಟ್ಟಡಗಳನ್ನು ತೆರವುಗೊಳಿಸುವುದಾಗಲೀ ಅಥವಾ ನವೀಕರಣವನ್ನಾಗಲಿ ಮಾಡಬಾರದು ಎಂದು ಸೂಚಿಸಿತು.