ಬೆಂಗಳೂರು: ರಾಜ್ಯ ಚುನಾವಣಾ ಆಯೋಗವು ವಿವಿಧ ಕಾರಣಗಳಿಂದ ತೆರವಾಗಿರುವ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಿಸಿರುವ ಹಿನ್ನೆಲೆಯಲ್ಲಿ ಸೆ. 21ರಿಂದ ಅ. 27ರವರೆಗೆ ಚುನಾವಣೆ ಪ್ರಕ್ರಿಯೆ ನಡೆಯಲಿದ್ದು, ಸೆ. 23ರಿಂದ 30ರವರೆಗೆ ನಾಮಪತ್ರ ಸಲ್ಲಿಕೆ ವೇಳೆ ಕೇಂದ್ರದ ಸುತ್ತಮುತ್ತ ನಿರ್ಬಂಧ ಹೊರಡಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರಗಳಲ್ಲಿ ಪ್ರಕ್ರಿಯೆ ನಡೆಯಲಿದ್ದು, ನಾಮಪತ್ರ ಸಲ್ಲಿಸುವ ಸಂದರ್ಭಗಳಲ್ಲಿ ಆಯಾ ಅಭ್ಯರ್ಥಿಗಳ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಚೇರಿಯ ಬಳಿ ಗುಂಪು ಸೇರುವ ಸಾಧ್ಯತೆಗಳಿವೆ. ಹಾಗಾಗಿ ರಸ್ತೆ ತಡೆ, ಮೆರವಣಿಗೆ, ಪ್ರತಿಭಟನೆ ಮೊದಲಾದ ಚಟುವಟಿಕೆಗಳು ನಡೆಯುವ ಸಂಭವವಿರುತ್ತದೆ. ಇದರಿಂದಾಗಿ ವಾಹನ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಿ ಸರ್ಕಾರಿ ಕಚೇರಿಗಳ ಕಾರ್ಯ ಕಲಾಪಗಳಿಗೆ ಅಡಚಣೆ ಉಂಟಾಗುವ ಸಾಧ್ಯತೆ ಇರುತ್ತದೆ. ಕೆಲವು ದುಷ್ಕರ್ಮಿಗಳು ಮತ್ತು ಸಮಾಜಘಾತುಕ ವ್ಯಕ್ತಿಗಳು ಈ ಸಮಯ ಉಪಯೋಗಿಸಿಕೊಂಡು ಸಾರ್ವಜನಿಕ ಮತ್ತು ಸರ್ಕಾರಿ ಆಸ್ತಿಪಾಸ್ತಿಗಳಿಗೆ ಹಾನಿ ಉಂಟುಮಾಡುವ, ವಾಹನ ಸಂಚಾರ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಮಾಡುವ ಸಾಧ್ಯತೆಗಳಿರುವುದರಿಂದ ಆಯಾ ವಿಭಾಗಗಳ ಉಪ ಪೊಲೀಸ್ ಆಯುಕ್ತರು ಹಾಗೂ ಬಿಬಿಎಂಪಿ ಆಯುಕ್ತರು ಮತ್ತು ವಿಶೇಷ ಆಯುಕ್ತರರೊಂದಿಗೆ ಚರ್ಚಿಸಿ ಆದೇಶ ಹೊರಡಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.