ಬೆಂಗಳೂರು: ಸಾರ್ವಜನಿಕರಿಗೆ ಅಗತ್ಯವಿರುವ ಸೇವೆಗಳನ್ನು ಹೊರತುಪಡಿಸಿ ಜನವಸತಿ ಪ್ರದೇಶದಲ್ಲಿ ಯಾವುದೇ ರೀತಿಯ ವಾಣಿಜ್ಯ ವ್ಯವಹಾರಗಳಿಗೆ ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಹೈಕೋರ್ಟ್ಗೆ ಭರವಸೆ ನೀಡಿದೆ. ನಗರದ ವಿಲ್ಸನ್ ಗಾರ್ಡನ್ನ ಜನವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಿದ್ದ ಬಿಬಿಎಂಪಿ ಕ್ರಮದ ವಿರುದ್ಧ ಸ್ಥಳೀಯ ನಿವಾಸಿಗಳ ಸಂಘ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪಿ.ಬಿ.ವರಾಲೆ ಅವರಿದ್ದ ವಿಭಾಗೀಯ ಪೀಠಕ್ಕೆ ಬಿಬಿಎಂಪಿ ಪ್ರಮಾಣಪತ್ರದ ಮೂಲಕ ಈ ಮಾಹಿತಿ ನೀಡಿದೆ. ಅಲ್ಲದೆ, ಈ ನಿಯಮವನ್ನು ಉಲ್ಲಂಘಿಸಿದವರ ವಿರುದ್ದ ಪಾಲಿಕೆ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದೆ.
ಜನವಸತಿ ಪ್ರದೇಶದಲ್ಲಿ ಸಣ್ಣಪುಟ್ಟ ಅಂಗಡಿಗಳು, ಹಾಲಿನ ಬೂತ್‌ಗಳು, ಸ್ಟೇಷನರಿ ಅಂಗಡಿಗಳು, ಬೇಕರಿಗಳು, ಎಸ್‌ಟಿಡಿ ಬೂತ್‌ಗಳು, ಬ್ಯಾಂಕುಗಳು ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಿರುವ ಸೇವೆಗಳಿಗೆ ಮಾತ್ರ ಅವಕಾಶವಿರಲಿದೆ ಎಂದು ಪಾಲಿಕೆ ತಿಳಿಸಿದೆ. ಅಲ್ಲದೆ, ವಿಲ್ಸನ್ ಗಾರ್ಡನ್ನ ವಸತಿ ಪ್ರದೇಶದಲ್ಲಿ ಇದ್ದಂತಹ 101 ಹೂವಿನ ಅಂಗಡಿಗಳಲ್ಲಿ ಈಗಾಗಲೇ 60 ಅನ್ನು ತೆರವು ಮಾಡಲಾಗಿದೆ. ಇನ್ನುಳಿದ 41 ಅಂಗಡಿಗಳನ್ನು ಮುಂದಿನ ಎರಡು ವಾರಗಳಲ್ಲಿ ತೆರವು ಮಾಡಲಾಗುವುದು ಎಂದು ಪಾಲಿಕೆ ಪರ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.