ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಸಭೆ ಆರಂಭವಾಗಿದೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸಭೆ ಆರಂಭವಾಗಿದೆ. ಸಭೆಯಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಗೆ ವಿಶೇಷ ಸದಸ್ಯತ್ವ ನೋಂದಣಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ, ಜನಜಾಗೃತಿ ಮೂಡಿಸಲು ರಾಜ್ಯಾದ್ಯಂತ ಅಭಿಯಾನ ನಡೆಸುವ ಬಗ್ಗೆ ಚರ್ಚೆ ನಡೆಯಲಿದೆ.
ಬಿಜೆಪಿ ಸರ್ಕಾರದ ಆಡಳಿತ ವಿರುದ್ಧ ಹಿರಿಯ ನಾಯಕರು ಪ್ರತಿ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಿ ಜಾಗೃತಿ ಮೂಡಿಸುವ ಬಗ್ಗೆ ಚರ್ಚೆ ಆಗಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ, ಪಕ್ಷದ ಎಲ್ಲಾ ಸಮಿತಿಗಳಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ ಆಯೋಜನೆ ಬಗ್ಗೆ, ಸ್ವಾತಂತ್ರ್ಯದ 75ನೇ ವರ್ಷಾಚಾರಣೆಯನ್ನ ಆಚರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಮಾಜಿ ಸಚಿವ ಕೆ ಎಚ್ ಮುನಿಯಪ್ಪ, ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್, ಆರ್.ವಿ.ದೇಶಪಾಂಡೆ, ಆಂಜನೇಯ, ಕೋಳಿವಾಡ, ಬಿ.ಕೆ. ಹರಿಪ್ರಸಾದ್, ಉಮಾಶ್ರೀ, ಈಶ್ವರ್ ಖಂಡ್ರೆ, ಧ್ರುವ ನಾರಾಯಣ್, ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ ಸೇರಿದಂತೆ ಕೆಲ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದಾರೆ. ಹಾನಗಲ್ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಶಾಸಕ ಶ್ರೀನಿವಾಸ್ ಮಾನೆ ಸಹ ಆಗಮಿಸಿದ್ದಾರೆ.