ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗಮನಾರ್ಹ ಮೈಲಿಗಲ್ಲು ಸಾಧಿಸಿದೆ. 4000 ಮೀಟರ್ ಉದ್ದದ ಮತ್ತು 45 ಮೀಟರ್ ಅಗಲದಲ್ಲಿ ಮೊದಲ ವಿಮಾನ ಮೇಲೆ ಹಾರುವುದರೊಂದಿಗೆ, ಬೆಂಗಳೂರು ವಿಮಾನ ನಿಲ್ದಾಣ ನೂತನ ದಕ್ಷಿಣ ರನ್‍ವೇ ಕಾರ್ಯಾಚರಣೆಗಳನ್ನು ಆರಂಭಿಸಿದೆ. ಇದರೊಂದಿಗೆ ಸ್ವತಂತ್ರ, ಸಮಾನಾಂತರ ರನ್‍ವೇಗಳೊಂದಿಗೆ ಕಾರ್ಯಾಚರಣೆ ನಡೆಸುವ ದೇಶದ ಮೊದಲ ವಿಮಾನ ನಿಲ್ದಾಣ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣವಾಗಿದೆ.
ಎರಡೂ ರನ್‍ವೇಗಳಲ್ಲಿ ಒಂದೇ ಸಮಯದಲ್ಲಿ ವಿಮಾನಗಳು ಮೇಲಕ್ಕೆ ಹಾರುವ, ಕೆಳಕ್ಕೆ ಇಳಿಯುವ ಕಾರ್ಯಾಚರಣೆ ನಡೆಸಲು ಅವಕಾಶವಿರುತ್ತದೆ. ನೂತನ ರನ್‍ವೇ ಕಾರ್ಯಾಚರಣೆ ಆರಂಭಿಸಿರುವುದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಇದು ಐತಿಹಾಸಿಕ ದಿನವಾಗಿದೆ’’ ಎಂದು ಬೆಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆ ನಡೆಸುತ್ತಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(ಬಿಐಎಎಲ್)ದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮಾರರ್ ಹೇಳಿದ್ದಾರೆ.
ನಮ್ಮ ಮೊದಲ ರನ್‍ವೇ 11 ವರ್ಷಗಳ ಹಿಂದೆ ಆರಂಭವಾಗಿದ್ದು, ಕಳೆದ ದಶಕದಲ್ಲಿ ಈ ಪ್ರದೇಶದ ಆರ್ಥಿಕ ಅಭಿವೃದ್ಧಿಯ ಆಧಾರವಾಗಿದೆ. ಭಾರತದಲ್ಲಿ ವಿಮಾನಯಾನ ಉದ್ಯಮ ಅಪಾರ ಬೆಳವಣಿಗೆಗೆ ಸಜ್ಜಾಗಿರುವುದರೊಂದಿಗೆ ಕಾರ್ಯಾಚರಣೆಯಲ್ಲಿರುವ 2 ರನ್‍ವೇಗಳು ಕರ್ನಾಟಕ ಮತ್ತು ಭಾರತದ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸಲು ಹಾಗೂ ಈಗಿರುವ ಬೇಡಿಕೆಯನ್ನು ಪೂರೈಸಲು ಬೇಕಾದ ಹೆಚ್ಚಿನ ಚಾಲನೆಯನ್ನು ನೀಡಲಿವೆ. ಹಲವಾರು ಪಾಲುದಾರರ ನಡುವಿನ ಅಸಾಧಾರಣ ಪಾಲುದಾರಿಕೆಯ ಫಲಿತಾಂಶ ಈ ಪ್ರಮುಖ ಮೂಲಸೌಕರ್ಯ ಆರಂಭವಾಗುವುದಾಗಿದೆ. ಉನ್ನತ ಮಟ್ಟದ ಮೌಲ್ಯೀಕರಣ ಮತ್ತು ಪ್ರಯತ್ನಗಳ ಮೂಲಕ ಅಭಿವೃದ್ಧಿಪಡಿಸಲಾದ ಪ್ರಕ್ರಿಯೆಗಳು ಮತ್ತು ಕ್ರಮಗಳ ಅನುಷ್ಠಾನದಿಂದ ಇದು ಸಾಧ್ಯವಾಗಿದೆ. ಬೆಂಗಳೂರು ವಿಮಾನ ನಿಲ್ದಾಣವನ್ನು ಭಾರತದ ನೂತನ ಪ್ರವೇಶದ್ವಾರವಾಗಿ ಪರಿವರ್ತಿಸುವ ನಮ್ಮ ದೃಷ್ಟಿಕೋನವನ್ನು ನೂತನ ರನ್‍ವೇ ವಿಸ್ತರಿಸಲಿದೆ’’ ಎಂದು ಮಾರರ್ ಹೇಳಿದರು.
ಇದರೊಂದಿಗೆ ಸಾಕಷ್ಟು ಕಡಿಮೆ ಬೆಳಕು ಇದ್ದಾಗಲೂ ಕೂಡ ವಿಮಾನ ಮೇಲಕ್ಕೆ ಹಾರುವ ಮತ್ತು ಇಳಿಯುವ ಅವಕಾಶ ಲಭ್ಯವಾಗಲಿದೆ. ನೂತನ ರನ್‍ವೇಗೆ ಆರ್ಡಬ್ಲೂವೈ 09ಆರ್/27ಎಲ್ ಎಂಬ ಕೋಡ್ ನೀಡಲಾಗಿದ್ದು, ಪ್ರಸ್ತುತ ರನ್‍ವೇಗೆ, ಈ ಹಿಂದೆ ಇದ್ದ ಆರ್ಡಬ್ಲೂವೈ 09/27ರಿಂದ ಆರ್ಡಬ್ಲೂವೈ 09ಎಲ್/27ಆರ್ ಎಂದು ಪುನರ್ ನಾಮಕರಣ ಮಾಡಲಾಗುವುದು. ಸುರಕ್ಷತೆ, ಅಗ್ರಮಾನ್ಯ ಆದ್ಯತೆ ಆಗಿರುವುದರೊಂದಿಗೆ ಬಿಐಎಎಲ್ ವಿಮಾನಗಳನ್ನು ರಕ್ಷಿಸುವ ಮತ್ತು ಅಗ್ನಿಶಾಮಕ ಠಾಣೆಯನ್ನು ನಿರ್ಮಿಸಿದ್ದು, ಇವು ಉನ್ನತ ತಂತ್ರಜ್ಞಾನದ ಉಪಕರಣಗಳೊಂದಿಗೆ ಸಜ್ಜಾಗಿದೆ.
ಇನ್ನು ಅತ್ಯಾಧುನಿಕ ಕ್ರ್ಯಾಷ್ ಫೈರ್ ಟೆಂಡರ್‍ಗಳು(ಸಿಎಫ್‍ಟಿಎಸ್) ಇದ್ದು, ದಕ್ಷಿಣದ ರನ್‍ವೇಯಲ್ಲಿ ಬೆಂಕಿಗೆ ಸಂಬಂಧಿತ, ಯಾವುದೇ ತುರ್ತು ಸ್ಥಿತಿಗಳನ್ನು ನಿಭಾಯಿಸಬಹುದಾಗಿದೆ. ವಿಮಾನ ನಿಲ್ದಾಣದ ಅಗ್ನಿಶಾಮಕ ಟ್ರಕ್‍ಗಳು ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಹೊಂದಿದ್ದು, ನವೀನ ಉತ್ಪನ್ನ ವೈಶಿಷ್ಟ್ಯಗಳಿಂದ ಕೂಡಿವೆ. ನೂರಕ್ಕೂ ಹೆಚ್ಚಿನ ಅಗ್ನಿಶಾಮಕ ಸಿಬ್ಬಂದಿಯನ್ನು ಕರ್ನಾಟಕದ ಎಲ್ಲೆಡೆಯಿಂದ ನೇಮಿಸಿಕೊಳ್ಳಲಾಗಿದೆ. ಪರಿಣತ ಅಗ್ನಿಶಾಮಕ ಎಂಜಿನಿಯರ್ಗಳನ್ನು ನಾಗಪುರದ ರಾಷ್ಟ್ರೀಯ ಅಗ್ನಿ ಸುರಕ್ಷತೆ ಕಾಲೇಜಿನಿಂದ ಸೇರಿಸಿಕೊಳ್ಳಲಾಗಿದ್ದು, ಅಗ್ನಿಶಾಮಕ ದಳವನ್ನು ದೃಢಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.