ಬೆಂಗಳೂರು : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಹಾಗೂ ಈವರೆಗೂ ಜನರಲ್ ಕೆಟಗರಿಯಲ್ಲಿ ಸೀಟು ದೊರೆಯದ ಅಭ್ಯರ್ಥಿಗಳಿಗೆ ಇಂದಿನಿಂದ ಕಾಮೆಡ್-ಕೆ ವಿಶೇಷ ಸುತ್ತಿನ ಸೀಟು ಹಂಚಿಕೆ ಮಾಡುತ್ತಿದೆ.
ಎಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪ ಕೋರ್ಸ್‌ಗಳಿಗೆ ಡಿ.27ರವರೆಗೆ ಮೂರು ಸುತ್ತಿನ ಸೀಟು ಹಂಚಿಕೆ ಮಾಡಲಾಗಿದ್ದು, ಈವರೆಗೆ ಸೀಟು ಸಿಗದ ವಿದ್ಯಾರ್ಥಿಗಳಿಗೆ ಇಂದು ವಿಶೇಷ ಸುತ್ತಿನ ಸೀಟು ಹಂಚಿಕೆ ನಡೆಯುತ್ತಿದೆ.
ಕಾಮೆಡ್-ಕೆ ಪರೀಕ್ಷೆ ಬರೆದು ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ವಾಸ್ತುಶಿಲ್ಪ ಕೋರ್ಸ್‌ಗಳು ಬಯಸಿದ್ದಲ್ಲಿ ಮಧ್ಯಾಹ್ನ 12ರಿಂದ ರಾತ್ರಿ 8ರವರೆಗೆ 50 ಸಾವಿರ ಮುಂಗಡ ಶುಲ್ಕ ಪಾವತಿಸಬೇಕು. ಮಧ್ಯಾಹ್ನ 12ರಿಂದ 2:30ರವರೆಗೆ ಆಯ್ಕೆ ಮತ್ತು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.
ಡಿ.31ರ ಮಧ್ಯಾಹ್ನ 2ರಿಂದ ಸಂಜೆ 5:30ರವರೆಗೆ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತೆ. ಜನವರಿ 2ರ ಸಂಜೆ 5:30ರೊಳಗೆ ಹಂಚಿಕೆಯಾದ ಕಾಲೇಜುಗಳಿಗೆ ದಾಖಲಾತಿ ಪಡೆದುಕೊಳ್ಳಬೇಕು ಎಂದು ಕಾಮೆಡ್ ಕೆ ಕಾರ್ಯಕಾರಿ ಕಾರ್ಯದರ್ಶಿಗಳು ಪ್ರಕಟಣೆ ಹೊರಡಿಸಿದ್ದಾರೆ.