ಬೆಂಗಳೂರು: ಕೂಡು ಒಕ್ಕಲಿಗರ ಓಲೈಸುವ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಇಬ್ಬರ ನಡುವೆ ಶೀತಲ ಸಮರ ಆರಂಭವಾಗಿದೆ. ಈ ಶೀತಲ ಸಮರದಿಂದಾಗಿ ಉತ್ತರ ಕರ್ನಾಟಕ ಭಾಗದ ಕೂಡು ಒಕ್ಕಲಿಗ ಸಮುದಾಯ ಒಕ್ಕಲಿಗರೋ? ಲಿಂಗಾಯತರೋ? ಎಂಬ ಜಿಜ್ಞಾಸೆ ಮೂಡುವ ಸ್ಥಿತಿ ಏರ್ಪಟ್ಟಿದೆ.
ಕೂಡು ಒಕ್ಕಲಿಗ ಮುಖಂಡರು ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಸಮಾಲೋಚಿಸಿದ ನಂತರ ಈ ಗೊಂದಲ ಶುರುವಾಗಿದೆ. ಇದಕ್ಕೆ ಪುಷ್ಟಿ ನೀಡುವ ರೀತಿ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಗರಂ ಆಗಿದ್ದಾರೆ ಎಂಬ ಮಾತು ಸಹ ಕೇಳಿ ಬರುತ್ತಿದೆ.
ಕೂಡು ಒಕ್ಕಲಿಗ ಮುಖಂಡರನ್ನು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ನಿನ್ನೆ ಡಿಕೆಶಿ ಅವರ ಸದಾಶಿವನಗರ ನಿವಾಸಕ್ಕೆ ಕರೆದುಕೊಂಡು ಬಂದಿದ್ದರು. ಪ್ರಸ್ತುತ ಲಿಂಗಾಯತ ಸಮುದಾಯದಲ್ಲಿ ಗುರುತಿಸಿಕೊಂಡಿರುವ ಕೂಡು ಒಕ್ಕಲಿಗರನ್ನು ಚಿನ್ನಪ್ಪರೆಡ್ಡಿ ಆಯೋಗದ ವರದಿಯಂತೆ ನಮ್ಮನ್ನು ಒಕ್ಕಲಿಗ 3ಎ ಪಂಗಡಕ್ಕೆ ಸೇರಲು ಸಹಕರಿಸುವಂತೆ ನಿಯೋಗವು ಡಿಕೆಶಿಗೆ ಮನವಿ ಮಾಡಿತ್ತು. ಇದರ ಮಾಹಿತಿ ತಿಳಿಯುತ್ತಿದ್ದಂತೆ ಪ್ರಿಯಾಂಕ್ ಖರ್ಗೆಗೆ ಕರೆ ಮಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು, ಡಿಕೆಶಿ ಬಳಿ ಕೂಡು ಒಕ್ಕಲಿಗರ ನಿಯೋಗ ಕರೆದೊಯ್ದಿದ್ದೇಕೆ? ಉತ್ತರ ಕರ್ನಾಟಕ ಭಾಗದಲ್ಲಿ 15 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿರೋ ಕೂಡು ಒಕ್ಕಲಿಗರು ಲಿಂಗಾಯತರ ಉಪ ಪಂಗಡ ಎಂದಿದ್ದಾರೆ.
ಎಂಬಿಪಿ ಮನೆಗೆ ಕೂಡು ಒಕ್ಕಲಿಗ ಮುಖಂಡರ ನಿಯೋಗ:
ಇದಾದ ಬಳಿಕ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಇಂದು ಪ್ರಿಯಾಂಕ ಖರ್ಗೆ, ಕೂಡು ಒಕ್ಕಲಿಗ ಮುಖಂಡರ ನಿಯೋಗವನ್ನು ಎಂಬಿಪಿ ಮನೆಗೆ ಕರೆತಂದಿದ್ದರು. ಕೂಡು ಒಕ್ಕಲಿಗರು ಲಿಂಗಾಯತ ಸಮುದಾಯದ ಜೊತೆ ಗುರುತಿಸಿಕೊಂಡರೆ ಮುಂದೆ 2ಎ ಮೀಸಲಾತಿ ಸಿಕ್ಕಾಗ ಸಹಾಯವಾಗಲಿದೆ ಎಂದು ಮುಖಂಡರ ಮನವೊಲಿಸುತ್ತಿರುವ ಎಂಬಿ ಪಾಟೀಲ್, ಇದರಲ್ಲಿ ಬಹುತೇಕ ಯಶಸ್ಸು ಕಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ ಕೂಡು ಒಕ್ಕಲಿಗ ಸಮುದಾಯದ ಐಡೆಂಟಿಟಿ ಗೊಂದಲದ ನಡುವೆ ಡಿಕೆಶಿ ವರ್ಸಸ್ ಎಂ.ಬಿ.ಪಾಟೀಲ್ ನಡುವೆ ಶೀತಲ ಸಮರ ಶುರುವಾಗಿದ್ದು ಇದು ಮುಂದಿನ ದಿನಗಳಲ್ಲಿ ಯಾವ ಹಂತ ತಲುಪಲಿದೆ ಎಂಬ ಕುತೂಹಲ ಮೂಡಿದೆ.
ಕೂಡು ಒಕ್ಕಲಿಗರೂ ಯಾವ ಕಾರಣಕ್ಕೂ ಒಕ್ಕಲಿಗರಲ್ಲ:
ಮುಖಂಡರ ಜೊತೆ ಭೇಟಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್, ಕೂಡು ಒಕ್ಕಲಿಗ ಸಮುದಾಯ ಲಿಂಗಾಯತ ಸಮುದಾಯದ ಒಂದು ಉಪ ಪಂಗಡ. ನಾನು ಕೂಡ ಕೂಡು ಒಕ್ಕಲಿಗ ಪಂಗಡದಲ್ಲಿ ಜನಿಸಿದವನು. ನಮ್ಮ ತಂದೆ ಕೂಡು ಒಕ್ಕಲಿಗ ಸಮುದಾಯದವರು ಕೂಡು ಒಕ್ಕಲಿಗರು ಶುದ್ಧ ಶಾಕಾಹಾರಿಗಳು. ನಾವು ಒಕ್ಕಲುತನ ಮಾಡುತ್ತೇವೆ. ಒಕ್ಕಲಿಗರು ಒಕ್ಕಲುತನ ಮಾಡ್ತಾರೆ. ಅದಷ್ಟೆ ನಮಗೂ ಅವರಿಗೂ ಇರುವ ಸಾಮ್ಯತೆ. ಒಕ್ಕಲಿಗರು ಅಂತಾರೆ ನಮ್ಮನ್ನ ಕೂಡು ಒಕ್ಕಲಿಗ ಅಂತಾರೆ ಒಕ್ಕಲಿಗ ಅನ್ನೋ ಪದ ಹೋಲಿಕೆ ಇದೆ. ಆದರೆ ಕೂಡು ಒಕ್ಕಲಿಗರೂ ಯಾವ ಕಾರಣಕ್ಕೂ ಒಕ್ಕಲಿಗರಲ್ಲ. ಅವರು ಲಿಂಗಾಯತ ಉಪ ಪಂಗಡದವರು. ಹಿಂದೆ ಎನ್. ಶಂಕ್ರಪ್ಪ ಆಯೋಗದ ವರದಿ ಸಂದರ್ಭದಲ್ಲಿ ಕೆಲವು ತಪ್ಪುಗಳಾಗಿವೆ. ಒಕ್ಕಲಿಗರು ಅಂತ ಕೆಲವು ಕಡೆ ದಾಖಲಾಗಿದೆ. ಆದರೆ ಅದಕ್ಕೆ ಫಿಡವಿಟ್ ಸಬ್ ಮಿಟ್ ಮಾಡಿ ಸರಿಪಡಿಸುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಲಿಂಗಾಯತರಲ್ಲಿ ಕೂಡು ಒಕ್ಕಲಿಗ ಕೂಡ ಒಂದು ಪಂಗಡ:
ಒಕ್ಕಲಿಗರ ಬಗ್ಗೆ ಗೌರವ ಇದೆ, ಅವರ ಸ್ವಾಮೀಜಿಯವರ ಬಗ್ಗೆ ಗೌರವ ಇದೆ, ಆದರೆ ನಾವು ಲಿಂಗಾಯತರು. ಬೀದರ್, ಕಲಬುರಗಿ ಭಾಗದವರು ಇಂದು ಬಂದು ಮೀಸಲಾತಿ ಬೇಡಿಕೆ ಮುಂದಿಟ್ಟಿದ್ದಾರೆ. ನಮಗೂ 3ಎ ಅಥವಾ 2ಎ ಮೀಸಲಾತಿ ಬೇಕು ಅಂತ ಕೇಳ್ತಿದ್ದಾರೆ. ಶಂಕ್ರಪ್ಪ ಕಮಿಟಿಯಲ್ಲಿ ಒಂದು ತಪ್ಪಾಗಿತ್ತು, ಅದಕ್ಕೆ ಅಫಿಡವಿಟ್ ಹಾಕಿ ಸರಿ ಮಾಡಿದಾರೆ. ಲಿಂಗಾಯತರಲ್ಲಿ ಕೂಡು ಒಕ್ಕಲಿಗ ಕೂಡ ಒಂದು ಪಂಗಡ. ನಾನು ಕೂಡ ಇದೇ ಸಮುದಾಯದಲ್ಲಿ ಹುಟ್ಟಿದ್ದೇನೆ, ನನ್ನ ತಂದೆಯವರೂ ಸಹ ಇದೇ ಸಮುದಾಯದಲ್ಲಿ ಹುಟ್ಟಿದವರು. ಎಲ್ಲ ಸಮುದಾಯಗಳು ಮೀಸಲಾತಿ ಬಯಸಿದಂತೆ ಇವರು ಬಯಸಿದ್ದಾರೆ. ಅದೇ ಬೇಡಿಕೆ ಬಹಳ ವರ್ಷಗಳಿಂದ ಮುಂದಿಟ್ಟಿದ್ದಾರೆ, ನನ್ನ ಬಳಿಯೂ ಇದೇ ಬೇಡಿಕೆ ಹೇಳಿದ್ದಾರೆ ಎಂದರು.
ಒಬ್ಬ ವ್ಯಕ್ತಿಯಿಂದ ತಪ್ಪಾದರೆ ಇಡೀ ಸಮಾಜಕ್ಕೆ ದೂರಬಾರದು. ನಿಮಗೂ 3ಎ ಮೀಸಲಾತಿ ಸಿಗುತ್ತೆ ಅಂತ ಪುಸಲಾಯಿಸೋ ಕೆಲಸ ಮಾಡಿದ್ರು. ಆದರೆ ಎಲ್ಲಾ ದಾಖಲೆಗಳಲ್ಲಿ ಹಿಂದೂ ಲಿಂಗಾಯತ ಕೂಡು ಒಕ್ಕಲಿಗ ಅಂತ ಇದೆ. ಲಿಂಗಾಯತ ಕೂಡು ಒಕ್ಕಲಿಗ ಅಂತ ಇದೆ ಎಂದು ವಿವರಿಸುವ ಕಾರ್ಯ ಮಾಡಿದರು.