ಬೆಂಗಳೂರು: ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಟಿಕೆಟ್ಗಾಗಿ ಅನರ್ಹ ಶಾಸಕ ಬಿ ಸಿ ಪಾಟೀಲ್ ಹಾಗೂ ಮಾಜಿ ಶಾಸಕ ಯು ಬಿ ಬಣಕಾರ್ ನಡುವೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಡೆಸಿದ ಸಂಧಾನ ಸಭೆ ವಿಫಲಗೊಂಡಿದೆ.
ಹಿರೇಕೆರೂರು ಉಪಚುನಾವಣೆ ಟಿಕೆಟ್ ಸಂಬಂಧ ಬಿ ಸಿ ಪಾಟೀಲ್ ಹಾಗೂ ಯು ಬಿ ಬಣಕಾರ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಇಬ್ಬರನ್ನೂ ಕರೆಸಿ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಸಂಧಾನಕ್ಕೆ ಪ್ರಯತ್ನಿಸಿದರು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಹ ಈ ವೇಳೆ ತಮ್ಮ ಪಾತ್ರ ವಹಿಸಿದ್ದರು.
ಬಿ ಸಿ ಪಾಟೀಲ್ ರಾಜೀನಾಮೆಯಿಂದಾಗಿ ನಮಗೆ ಅಧಿಕಾರ ಸಿಕ್ಕಿದ್ದು, ಸರ್ಕಾರ ರಚನೆಯಲ್ಲಿ ಬಿ ಸಿ ಪಾಟೀಲ್ ತ್ಯಾಗವೂ ಇದೆ. ನಾನವರಿಗೆ ಮಾತು ಕೊಟ್ಟಿದ್ದೇನೆ, ಬಿ ಸಿ ಪಾಟೀಲ್ ಪರ ಉಪ ಚುನಾವಣೆಯಲ್ಲಿ ಕೆಲಸ ಮಾಡಿ ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಎಂದು ಸಿಎಂ ಯಡಿಯೂರಪ್ಪ ಬಣಕಾರ್ಗೆ ಸಲಹೆ ನೀಡಿದರು.
ಆದರೆ, ಸಿಎಂ ಮನವೊಲಿಕೆಗೆ ಒಪ್ಪದ ಯು ಬಿ ಬಣಕಾರ್, ನನಗೂ ಬಿ ಸಿ ಪಾಟೀಲ್ ಅವರಿಗೂ ಹಲವು ವರ್ಷಗಳಿಂದ ಪೈಪೋಟಿ ಇದೆ. ಒಂದು ವೇಳೆ ನಿಮ್ಮ ಮಾತಿಗೆ ಒಪ್ಪಿ ನಾನು ಬಿ ಸಿ ಪಾಟೀಲ್ ಜೊತೆ ಓಡಾಡಿದರೆ ಕಾರ್ಯಕರ್ತರ ಗತಿ ಏನಾಗಬೇಕು? ಕ್ಷೇತ್ರದ ಜನತೆಗೆ ಹೇಗೆ ಮುಖ ತೋರಿಸಲಿ? ಬಿ ಸಿ ಪಾಟೀಲ್ಗೆ ಮತ ನೀಡಿ ಎಂದು ಯಾವ ಮುಖ ಇಟ್ಟುಕೊಂಡು ಕೇಳಲಿ ಎಂದು ಸಿಎಂ ಮುಂದೆ ಬಣಕಾರ್ ಅಸಮಾಧಾನ ಹೊರಹಾಕಿದ್ದಾರೆ.
ಅಲ್ಲದೇ, ಒಮ್ಮೆ ಬೇಕಾದರೆ ಹಿರೇಕೆರೂರಿಗೆ ಬನ್ನಿ ನಿಮಗೆ ವಾಸ್ತವ ಸ್ಥಿತಿ ಗೊತ್ತಾಗುತ್ತದೆಯೆಂದು ಸಿಎಂಗೆ ಹೇಳಿದ್ದಾರೆ. ಈ ವೇಳೆ ಮೌನವಾಗಿದ್ದ ಬಿ ಸಿ ಪಾಟೀಲ್ ಟಿಕೆಟ್ ಪಕ್ಕಾ ಎನ್ನುವ ಲೆಕ್ಕಾಚಾರದಲ್ಲಿದ್ದರು. ಎಷ್ಟು ಸಮಯವಾದರೂ ಬಿ ಸಿ ಪಾಟೀಲ್ ಪರ ಕೆಲಸ ಮಾಡಲು ಒಲ್ಲದ ಬಣಕಾರ್ ಸಿಎಂ ನಿವಾಸದಿಂದ ನಿರ್ಗಮಿಸಿದರು.