ಬೆಂಗಳೂರು: ದೆಹಲಿಗೆ ತೆರಳಿರುವ ಸಿಎಂ ಯಡಿಯೂರಪ್ಪನವರು ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪ್ರಮುಖ ಸಚಿವರನ್ನು ಅವರು ಭೇಟಿ ಮಾಡಿ ಮಾತುಕತೆ ನಡೆಸುತ್ತಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸಂಜೆ 6.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ನೀರಾವರಿ ಯೋಜನೆ ಸೇರಿದಂತೆ ರಾಜ್ಯದ ಅಭಿವೃದ್ಧಿ ಯೋಜನೆಗಳ ವಿಚಾರದ ಕುರಿತು ಮಾತುಕತೆ ನಡೆಸಲಿದ್ದೇನೆ ಎಂದರು.
ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ಕೇಂದ್ರದ ಪ್ರಮುಖ ಸಚಿವರನ್ನು ನಾಳೆ ಭೇಟಿಯಾಗಿ ಕರ್ನಾಟಕಕ್ಕೆ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸುತ್ತೇನೆ. ನಂತರ ಹೊಸದಾಗಿ ರಾಜ್ಯದಿಂದ ಸಂಪುಟ ಸೇರಿದ ನೂತನ ಸಚಿವರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದು, ನಾಳೆ ಸಂಜೆಯೇ ಬೆಂಗಳೂರಿಗೆ ವಾಪಸ್ಸಾಗಲಿದ್ದೇನೆ ಎಂದರು.
'ಮೇಕೆದಾಟು ಅನುಷ್ಠಾನ ಶತ ಸಿದ್ಧ'
ಮೇಕೆದಾಟು ಯೋಜನೆ ಪ್ರಾರಂಭ ಮಾಡುವುದರಿಂದ ತಮಿಳುನಾಡಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಈಗಾಗಲೇ ಪತ್ರದ ಮೂಲಕ ಮನವರಿಕೆ ಮಾಡಿಕೊಟ್ಟಿದ್ದೇನೆ. ಆದರೂ ತಮಿಳುನಾಡು ಸಿಎಂ ಸ್ಟಾಲಿನ್ ಹಿಡಿದ ಹಠ ಬಿಡುತ್ತಿಲ್ಲ. ಆದರೆ ಮೇಕೆದಾಟು ಕೆಲಸ ಪ್ರಾರಂಭ ಮಾಡಲು ಸಂಪೂರ್ಣ ಅವಕಾಶ ಕಾನೂನು ರೀತಿಯಲ್ಲಿಯೇ ನಮಗೆ ಇದೆ. ಅದರ ಬಗ್ಗೆ ಎಲ್ಲಾ ಚರ್ಚೆ ನಡೆಸಿ ಮೇಕೆದಾಟು ಯೋಜನೆ ಪೂರ್ಣಗೊಳಿಸಲು ಶಕ್ತಿಮೀರಿ ಪ್ರಯತ್ನ ಪಡುತ್ತೇವೆ ಎಂದರು.
ಇದನ್ನೂ ಓದಿ: ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತ: ಮೂವರ ಸಾವು, ಇಬ್ಬರು ಗಂಭೀರ
ಗೊಂದಲ ಬೇಡ:
ರಾಜ್ಯದ ಜನರಿಗೆ ಈ ಬಗ್ಗೆ ಯಾವುದೇ ರೀತಿಯ ಗೊಂದಲ ಬೇಡ. ಮೇಕೆದಾಟು ಯೋಜನೆಯನ್ನು ನೂರಕ್ಕೆ ನೂರರಷ್ಟು ಕಾರ್ಯರೂಪಕ್ಕೆ ತರುತ್ತೇವೆ ಎಂದು ಸಿಎಂ ಭರವಸೆ ನೀಡಿದರು.