ಬೆಂಗಳೂರು: ಡಿಸೆಂಬರ್ 21 ಅಥವಾ 22ರಂದು ದೆಹಲಿಗೆ ತೆರಳುವುದಾಗಿ ತಿಳಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದೀಗ ದೆಹಲಿ ಪ್ರವಾಸವನ್ನು ಮುಂದೂಡಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಮತ್ತೆ ನಿರಾಸೆ ಮೂಡುವಂತೆ ಮಾಡಿದೆ.
ಸಚಿವ ಸಂಪುಟ ವಿಸ್ತರಣೆ ವಿಚಾರ ಸಂಬಂಧ ದೆಹಲಿ ಪ್ರವಾಸವನ್ನು ಸಿಎಂ ಒಂದು ವಾರ ಮುಂದೂಡಿದ್ದಾರೆ. ಒಂದು ವಾರದ ನಂತರ ದೆಹಲಿಗೆ ಹೋಗುತ್ತೇನೆ ಎಂದು ಸಿಎಂ ಸ್ಪಷ್ಟಪಡಿಸಿರುವುದು, ಮತ್ತೆ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆ ಮೂಡುವಂತಾಗಿದೆ.
ಅನರ್ಹಗೊಂಡು ಚುನಾವಣೆ ಎದುರಿಸಿ ಗೆದ್ದ 11 ನೂತನ ಶಾಸಕರು, ಪರಾಜಿತಗೊಂಡಿರುವ ಇಬ್ಬರು ಅನರ್ಹ ಶಾಸಕರು, ಪಕ್ಷದ ಸೂಚನೆಯಂತೆ ಚುನಾವಣಾ ಕಣಕ್ಕೆ ಇಳಿಯದ ಆರ್ ಶಂಕರ್ ಹಾಗೂ ಮೂಲ ಬಿಜೆಪಿಯ ಕೆಲ ಹಿರಿಯ ನಾಯಕರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಸಿಎಂ ಪ್ರವಾಸ ಮುಂದೂಡಿಕೆಯಿಂದ ಮತ್ತಷ್ಟು ದಿನ ಕಾಯುವ ಅನಿವಾರ್ಯತೆ ಎದುರಿಸುವಂತಾಗಿದೆ.
ಸಚಿವ ಸಂಪುಟ ವಿಸ್ತರಣೆ ವಿಳಂಬ ಹಿನ್ನೆಲೆಯಲ್ಲಿ ಹುಣಸೂರು ಬಿಜೆಪಿ ಪರಾಜಿತ ಅಭ್ಯರ್ಥಿ ಹೆಚ್. ವಿಶ್ವನಾಥ್ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದರು. ಸಂಪುಟ ವಿಸ್ತರಣೆ ಹಾಗೂ ಸಂಪುಟದಲ್ಲಿ ಸ್ಥಾನದ ಬಗ್ಗೆ ಚರ್ಚೆ ನಡೆಸಿದರು. ಡಿ.22ರ ಬಳಿಕ ದೆಹಲಿಗೆ ಹೋಗುವುದಾಗಿ ಹೇಳಿದ್ದ ಸಿಎಂ ಬಿಎಸ್ವೈ ಇಂದು ದೆಹಲಿಗೆ ಹೋಗದ ಹಿನ್ನೆಲೆಯಲ್ಲಿ ಯಾವಾಗ ಸಂಪುಟ ವಿಸ್ತರಣೆ ಎಂಬುದರ ಬಗ್ಗೆ ಚರ್ಚೆ ನಡೆಸಿದರು. ಉಪಚುನಾವಣೆಯಲ್ಲಿ ಸೋತ ನಂತರವೂ ಸಚಿವ ಸ್ಥಾನಕ್ಕಾಗಿ ಪ್ರಬಲ ಆಕಾಂಕ್ಷಿಯಾಗಿರುವ ಹೆಚ್ ವಿಶ್ವನಾಥ್ ಸಚಿವ ಸ್ಥಾನಕ್ಕಾಗಿ ಲಾಬಿ ಮುಂದುವರೆಸಿದ್ದಾರೆ.