ಬೆಂಗಳೂರು: ಸಾರಿಗೆ ಮುಷ್ಕರ ಸಂಬಂಧ ಇನ್ನು ಮಾತನಾಡುವ ಪ್ರಶ್ನೇಯೇ ಇಲ್ಲ 8 ಬೇಡಿಕೆ ಈಡೇರಿಸಿದರೂ ಸುಖಾಸುಮ್ಮನೆ ಸತ್ಯಾಗ್ರಹ ಮಾಡಲಾಗುತ್ತಿದೆ. ಇವತ್ತಿನಿಂದ ಚುನಾವಣಾ ಪ್ರಚಾರಕ್ಕೆ ಪ್ರವಾಸ ಹೋಗುತ್ತಿದ್ದೇನೆ. ಇದರ ಮೇಲೆ ಅವರ ಖುಷಿ, ಏನ್ ಅನ್ನಿಸುತ್ತದೆಯೋ ಹಾಗೇ ಮಾಡಲಿ ಎಂದು ಸಂಧಾನದ ಬಾಗಿಲನ್ನು ಮುಚ್ಚಿರುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಸ್ಪಷ್ಟಪಡಿಸಿದರು.
ರಾಯಚೂರು ಪ್ರವಾಸಕ್ಕೆ ತೆರಳುವ ಮುನ್ನ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಅನೇಕ ಸಾರಿಗೆ ನೌಕರರು ಬಸ್ ಬಿಡಲು ಪ್ರಾರಂಭ ಮಾಡಿದ್ದಾರೆ. ಇನ್ನೂ ಸಾವಿರಾರು ಜನ ಬರೋಕೆ ಸಿದ್ಧವಿದ್ದಾರೆ. ಆದರೆ, ಅವರು ಬರದಂತೆ ಬೆದರಿಕೆ ಹಾಕುತ್ತಿದ್ದಾರೆ. ಹೆದರಿಸಿ ಅವರು ಬಸ್ ಓಡಿಸದಂತೆ ತಡೆಯುತ್ತಿದ್ದಾರೆ. ಬರುವಂತಹ ಅವರಿಗೆ ಎಲ್ಲ ರೀತಿಯ ಭದ್ರತೆ ಕೊಡುತ್ತೇವೆ. ಪೊಲೀಸ್ ಭದ್ರತೆ ಕೊಡುತ್ತೇವೆ, ಹೆದರದೇ ಬಂದು ಧೈರ್ಯವಾಗಿ ಬಸ್ ಓಡಿಸಿ ಎಂದು ವಿನಂತಿ ಮಾಡಿದರು.
ಇದನ್ನೂ ಓದಿ: ಮುಷ್ಕರದ ನಡುವೆಯೂ ಕರ್ತವ್ಯಕ್ಕೆ ಹಾಜರಾದ ಸಾರಿಗೆ ನೌಕರರ ಭಾವಚಿತ್ರಕ್ಕೆ ಶ್ರದ್ದಾಂಜಲಿ ಅರ್ಪಣೆ!
ಜನರಿಗೆ ಆಗುತ್ತಿರುವ ಸಮಸ್ಯೆ ನಿವಾರಣೆ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಮತ್ತೆ ಮತ್ತೆ ವಿನಂತಿ ಮಾಡುತ್ತೇನೆ. ಯಾರದ್ದೋ ಮಾತನ್ನ ಕೇಳಿಕೊಂಡು ಜನರಿಗೆ ತೊಂದರೆ ಕೊಡಿಬೇಡಿ. ಜನರು ಆಕ್ರೋಶಗೊಂಡಿದ್ದಾರೆ. ನಿಮ್ಮ ವಿರುದ್ದವೇ ಜನರು ಹೋರಾಟ ಮಾಡೋದನ್ನ ತಪ್ಪಿಸಬೇಕು ಅಂದರೆ ಗೌರವಯುತವಾಗಿ ಬಸ್ ಓಡಿಸಿ. ಈಗಾಗಲೇ ಹತ್ತು ಬಾರಿ ಹೇಳಿದ್ದೇನೆ. 9 ಬೇಡಿಕೆಗಳಲ್ಲಿ 8 ಬೇಡಿಕೆ ಈಡೇರಿಸಿದ್ದೇನೆ. ಅದರಲ್ಲಿ ಏನಾದ್ರೂ ಕೊರತೆಯಿದ್ದರೆ ಸರಿಪಡಿಸೋಕೆ ನಾನು ಸಿದ್ಧವಿದ್ದೇನೆ ಎಂದರು.
ಮಾತುಕತೆ ನಡೆಸುವ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, ಯಾರ ಹತ್ತಿರ ಮಾತಾಡಲಿ. ಮಾತಾಡುವ ಪ್ರಶ್ನೇಯೇ ಇಲ್ಲ. 8 ಬೇಡಿಕೆ ಈಡೇರಿಸಿದರೂ ಸುಖಾಸುಮ್ಮನೆ ಸತ್ಯಾಗ್ರಹ ಮಾಡಬೇಡಿ, ನಾನು ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದೇನೆ ಇನ್ನು ನಿಮ್ಮ ಖುಷಿ, ನಿಮಗೆ ಅನ್ನಿಸಿದಂತೆ ಮಾಡಿ ಎಂದು ಹೇಳಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನೈಟ್ ಕರ್ಫ್ಯೂ ಮಾರ್ಗಸೂಚಿ ಹೊರಡಿಸಲಿದ್ದಾರೆ. ರಾತ್ರಿ ವೇಳೆ ಕ್ಲಬ್, ಮತ್ತೊಂದು ನಡೆಯುವುದರಿಂದ ಸಾಕಷ್ಟು ಅನಾಹುತ ಆಗುತ್ತಿತ್ತು, ಗೊಂದಲ ಆಗುತ್ತಿತ್ತು. ದಿನೇ ದಿನೆ ಪ್ರಕರಣ ಕೊರೊನಾ ಜಾಸ್ತಿ ಆಗುತ್ತಿದೆ. ಇವತ್ತು ಬೆಂಗಳೂರಲ್ಲಿ 6 ಸಾವಿರ ಪ್ರಕರಣಗಳು ದಾಟುತ್ತಿವೆ. ಜನರು ಮುನ್ನೆಚ್ಚರಿಕೆ ವಹಿಸಬೇಕು. ಮಾಸ್ಕ್ ಧರಿಸಬೇಕು, ಅಂತರ ಕಾಯ್ದುಕೊಳ್ಳಬೇಕು ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದರು..