ಬೆಂಗಳೂರು: ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಹೆಚ್.ಡಿ ರೇವಣ್ಣ ಅವರ ಆಪ್ತ ಅಧಿಕಾರಿ ಎಂದು ಗುರುತಿಸಿಕೊಂಡಿದ್ದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಹಾಗು ಮುಖ್ಯ ಇಂಜಿನಿಯರ್ ಕೃಷ್ಣಾರೆಡ್ಡಿಗೆ ಸಿಎಂ ಯಡಿಯೂರಪ್ಪ ಬಿಗ್ ಶಾಕ್ ನೀಡಿದ್ದಾರೆ.
ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಹುದ್ದೆಯಿಂದ ಕೃಷ್ಣಾರೆಡ್ಡಿಯನ್ನು ವರ್ಗಾಯಿಸಿ ಮುಖ್ಯಮಂತ್ರಿ ಆದೇಶಿಸಿದ್ದು, ಅವರ ಜಾಗಕ್ಕೆ ಜಲಸಂಪನ್ಮೂಲ ಇಲಾಖೆ ಮುಖ್ಯ ಇಂಜಿನಿಯರ್ ಗುರುಪ್ರಸಾದ್ ಅವರನ್ನು ನೇಮಕ ಮಾಡಿದ್ದಾರೆ.
ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದು ಸರ್ಕಾರ ಪತನಗೊಳ್ಳಲಿದೆ ಎನ್ನುವ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ನೂರಾರು ಇಂಜಿನಿಯರ್ಗಳಿಗೆ ಬಡ್ತಿ ಮತ್ತು ಕೊನೇ ಕ್ಷಣದಲ್ಲಿ ಗುತ್ತಿಗೆದಾರರಿಗೆ ಕೋಟ್ಯಂತರ ರೂ. ಬಿಲ್ ಪಾವತಿಸಿದ್ದರ ಬಗ್ಗೆ ಅಂದು ಪ್ರತಿಪಕ್ಷ ನಾಯಕರಾಗಿದ್ದ ಯಡಿಯೂರಪ್ಪ ಕಿಡಿಕಾರಿದ್ದರು. ಈ ಹಿನ್ನಲೆಯಲ್ಲಿ ಮೈತ್ರಿ ಸರ್ಕಾರ ಪತನಗೊಂಡ ಬೆನ್ನಲ್ಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೃಷ್ಣಾರೆಡ್ಡಿಯನ್ನು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಹುದ್ದೆಯಿಂದ ಎತ್ತಂಗಡಿ ಮಾಡಿದ್ದಾರೆ.